ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಗೆಲುವು ಖಚಿತ : ಕೆ.ಅಭಯಚಂದ್ರ ಜೈನ್ ವಿಶ್ವಾಸ
ಮೂಡುಬಿದಿರೆ: ಕಾಂಗ್ರೆಸ್ ಯಾವತ್ತಿಗೂ ಹರಿಯುವ ನದಿ. ಕರ್ನಾಟಕದಲ್ಲಿ ಕಾಂಗ್ರೆಸನ್ನು ನಿರ್ನಾಮ ಮಾಡುವುದಾಗಿ ಹೇಳಿದ್ದ ಬಿಜೆಪಿ ಇಂದು ಅಧಿಕಾರವನ್ನು ಕಳೆದುಕೊಂಡಿದೆ. ಜನಸಾಮಾನ್ಯರಿಗೆ ಸದಾ ಸ್ಪಂದಿಸುವ ಗುಣ ಹೊಂದಿರುವ ಕಾಂಗ್ರೆಸನ್ನು ನಿರ್ನಾಮ ಮಾಡಲು ಸಾಧ್ಯವೇ ಇಲ್ಲ. ಈ ಬಾರಿ ಸಂಸತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಈ ಮೂಲಕ ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಗೆಲುವು ಪಡೆದುಕೊಳ್ಳಲಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.
ಕಾಂಗ್ರೆಸ್ ದೇಶದಲ್ಲಿ ಬಡವರಿಗೆ ಉಳುವವನೆ ಹೊಲದೊಡೆಯ ಕಾನೂನಿನ ಮೂಲಕ ಭೂಮಿ, ನರೇಗಾ ಮೂಲಕ ಉದ್ಯೋಗ ನೀಡಿರುವುದಲ್ಲದೆ ಆಹಾರ ಭದ್ರತೆ ಕಾಯಿದೆಯನ್ನು ಜಾರಿಗೊಳಿಸಿ ಅನ್ನಭಾಗ್ಯದ ಕೊಡುಗೆ ನೀಡಿದೆ. ಕಾಂಗ್ರೆಸ್ ಹಿಂದುತ್ವದ ವಿರೋಧಿಯಲ್ಲ. ಬಿಜೆಪಿ ಸುಳ್ಳು ಹೇಳಿಕೆಯಲ್ಲಿ ನಿಸ್ಸೀಮತೆಯನ್ನು ಹೊಂದಿರುವುದರಿಂದ ಜನರನ್ನು ತಪ್ಪು ದಾರಿಗೆಳೆದು ಅಧಿಕಾರ ಪಡೆಯುತ್ತಿದೆ ಎಂದು ಅವರು ಆರೋಪಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ವ ಜಾತಿ ಜನಾಂಗದ ಪರವಾಗಿ ಕೆಲಸ ಮಾಡಿದವರು. ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿಗಳ ಮೂಲಕ ಬಡವರ ಕಲ್ಯಾಣಕ್ಕೆ ಕಟಿಬದ್ಧರಾಗಿದ್ದಾರೆ.
ಸಿದ್ದರಾಮಯ್ಯ ದುರ್ಬಲ ಮುಖ್ಯಮಂತ್ರಿ ಅಲ್ಲ; ಬಡವರ ಹಸಿವು ಅರಿತಿರುವ, ನುಡಿದಂತೆ ನಡೆವ, ನೇರ, ದಿಟ್ಟ, ಎಲ್ಲ ಜಾತಿವರ್ಗಗಳ ಮಂದಿಯನ್ನು ಪ್ರೀತಿಸುವ ಹೃದಯವಂತ ರಾಜಕಾರಣಿ.
ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ಅನುಷ್ಠಾನಕ್ಕೆ ತಂದು ಕನ್ನಡದಲ್ಲೇ ಸಹಿ ಮಾಡುವ ಮೂಲಕ ಕನ್ನಡ ಪರವಾಗಿಯೇ ನಿಲುವು ತಳೆದ, ರಾಜ್ಯದ ಅನುದಾನದ ಪಾಲುಗಳನ್ನು ನೀಡುವಲ್ಲಿ ವಿಫಲವಾದ ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆದ ಏಕೈಕ ನಾಯಕ ಸಿದ್ಧರಾಮಯ್ಯ ಎಂದು ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.
ಜನಸಾಮಾನ್ಯರಿಗೆ ಸದಾ ಸ್ಪಂದಿಸುವ ಮತ್ತು ಉತ್ತಮ ಶಿಕ್ಷಣವನ್ನು ಹೊಂದಿರುವ ಅಭ್ಯರ್ಥಿಗಳಾದ ವಕೀಲ, ಸಮಾಜ ಸೇವಕ ಪದ್ಮರಾಜ್ ಮತ್ತು ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿರುವುದು ಜನಪರ ಕೆಲಸಗಳನ್ನು ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪುರಸಭಾ ಸದಸ್ಯ ಹೆಚ್. ಸುರೇಶ್ ಪ್ರಭು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.