ರಾಜ್ಯವನ್ನು ದಿವಾಳಿಯೆಬ್ಬಿಸಿ ಅರಾಜಕತೆ ಸೃಷ್ಟಿಸಿದ ಕಾಂಗ್ರೆಸ್ ಸರಕಾರ: ಡಾ. ವೈ ಭರತ್ ಶೆಟ್ಟಿ
ಗ್ಯಾರಂಟಿಗಳ ಆಸರೆಯಿಂದ ಅಧಿಕಾರಕ್ಕೇರಿದ ಕಾಂಗ್ರೆಸ್, ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಮಾಡದೆ ರಾಜ್ಯದ ಜನತೆಗೆ ಮಂಕುಬೂದಿ ಎರಚಿದೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವ ಕಾಂಗ್ರೆಸ್ ಒಂದೇ ವರ್ಗದ ಅತಿಯಾದ ಓಲೈಕೆಯಲ್ಲಿ ತೊಡಗಿದೆ ಎಂದು ಮಂಗಳೂರು ಉತ್ತರದ ಶಾಸಕ ಡಾ. ವೈ ಭರತ್ ಶೆಟ್ಟಿ ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ತನ್ನ ಗ್ಯಾರಂಟಿಗಳಿಗೆ ಹಾಗೂ ಜಾಹೀರಾತುಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಬೊಕ್ಕಸವನ್ನು ಬರಿದಾಗಿಸಿ ಆಡಳಿತ ವ್ಯವಸ್ಥೆಯಲ್ಲಿ ವೈಫಲ್ಯ ಉಂಟಾಗಿ ಕಾನೂನು ಸುವ್ಯವಸ್ಥೆ ಕುಸಿದು ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದರು. ಇಡೀ ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ ಬರಪರಿಹಾರ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜನರು ವಲಸೆ ಹೋಗುತ್ತಿದ್ದಾರೆ. ಆದರೆ ಸರಕಾರಕ್ಕೆ ಮಾತ್ರ ರೈತರ ಬಗ್ಗೆ ಕಾಳಜಿಯಿಲ್ಲ. ಸರಕಾರ ಕೊಡುವ ಪರಿಹಾರದ ಆಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲರ ಹೇಳಿಕೆ ರೈತವಿರೋಧಿ ನಡೆಯಲ್ಲವೇ ಎಂದು ಶಾಸಕರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಖಜಾಂಜಿ ಸಂಜಯ್ ಪ್ರಭು, ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಹಿಳಾ ಮೋರ್ಚಾ ಉಪ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಮತ್ತು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.