ಮಾಣಿಲ ಕುಕ್ಕಾಜೆಯ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ:ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರು ಹೊರೆ ಕಾಣಿಕೆ
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರು ಹೊರೆ ಕಾಣಿಕೆ ಭಾನುವಾರ ನಡೆಯಿತು.ಭಾನುವಾರ ಬೆಳಿಗ್ಗೆ 48 ನಾರಿಕೇಳ ಮಹಾಗಣಪತಿ ಹೋಮ ನಡೆಯಿತು. ಮಧ್ಯಾಹ್ನ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯನ್ನು ವಿಟ್ಲ ಅರಮನೆಯ ಅನುವಂಶಿಕ ಆಡಳಿತದಾರ ಬಂಗಾರು ಅರಸರು ಉದ್ಘಾಟಿಸಿದರು.
ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ವಿಟ್ಲದಿಂದ ಕುದ್ದುಪದವು- ಪೆರುವಾಯಿ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು, ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕೀಲು ಕುದುರೆ, ಸಿಂಗಾರಿ ಮೇಳದೊಂದಿಗೆ ಕುಣಿತ ಭಜನೆ ಗಮನ ಸೆಳೆಯಿತು.ಶ್ರೀ ಕ್ಷೇತ್ರದ ಶ್ರೀಕೃಷ್ಣ ಗುರೂಜಿ ಅವರೊಂದಿಗೆ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಬಾಯಾರು ಚಿತ್ರಮೂಲ ಮಠದ ಶ್ರೀ ಉಮೇಶ್ವರ ಕಾಳಿ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಪ್ರಮುಖ ಉಪ ಸಮಿತಿಗಳ ಪದಾಧಿಕಾರಿಗಳು, ಸಂಘಸಂಸ್ಥೆಗಳ ಕಾರ್ಯಕರ್ತರು, ಸೇವಾ ಸಮಿತಿಗಳ ಕಾರ್ಯಕರ್ತರು, ಮಹಿಳಾ ಸಮಿತಿ ಸದಸ್ಯರು, ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.