ರಾಜಕೀಯ ಇಂದು ಸಂಪಾದನೆಗೆ ದಾರಿ || Politian’s earn today || V4NEWS

2004ರಿಂದ 2019ರ ನಡುವೆ ಸಂಸದರ ಸಂಪತ್ತು ಏರಿಕೆಯಲ್ಲಿ ಕರ್ನಾಟಕದ ಸಂಸದ ರಮೇಶ ಜಿಗಜಿಣಗಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಸಂಪತ್ತು 2004ರಲ್ಲಿ 54.8 ಲಕ್ಷ ಇದ್ದುದು 2019ಕ್ಕೆ 51.41 ಕೋಟಿಗೆ ಎಂದರೆ 9,098 ಶೇಕಡಾ ಏರಿಕೆ ಆಗಿತ್ತು.

ಇಂದೆಲ್ಲ ಬಡವರು ಚುನಾವಣೆಗೆ ನಿಲ್ಲುವುದು ಸಾಧ್ಯವಿಲ್ಲ. 1975ರವರೆಗೆ ಕಾಸಿಲ್ಲದವರು ಕೂಡ ಚುನಾವಣೆಗೆ ನಿಂತುದಿದೆ. ಗೆದ್ದುದೂ ಇದೆ. ಶಾಂತವೇರಿ ಗೋಪಾಲಗೌಡರು ಜನರಿಂದಲೇ ಚಿಲ್ಲರೆ ಸಂಗ್ರಹಿಸಿ ಚುನಾವಣೆ ಗೆಲ್ಲುತ್ತಿದ್ದರು. ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕನಾದರೂ ಸಾಯುವಾಗ ಇವರ ಬಳಿ ಬಿಡಿಗಾಸು ಇರಲಿಲ್ಲ. ಇಂತಾವರು ಆ ಕಾಲದಲ್ಲಿ ಕೆಲವರಾದರೂ ಸಿಗುತ್ತಾರೆ. ಮಂಗಳೂರಿನಲ್ಲಿ ಇದಿನಬ್ಬನವರು ಹಂಪನಹಣಕಟ್ಟೆಯ ಬಳಿಯ ಬಿರುವ ನರಸಪ್ಪಣ್ಣನವರ ನೆಹರು ಲಂಚ್ ಹೋಂಗೆ ಬೆಳಿಗ್ಗೆ ಹಾಜರಾಗಿ ಗುಂಪು ರಾಜಕೀಯ ಚರ್ಚೆಯಲ್ಲಿ ಈಡುಗೊಂಡವರು. ಹಾಗೆಯೇ ಹಾಡು, ಬರವಣಿಗೆ ಎಂದು ಕಾಂಗ್ರೆಸ್ ಟಿಕೆಟ್ ಸಿಕ್ಕಾಗ ಅವರ ಬಳಿ ಹಣ ಇರಲಿಲ್ಲ. ಆದರೂ ಆಗಿನ ಉಳ್ಳಾಲ ಈಗಿನ ಮಂಗಳೂರು ಕ್ಷೇತ್ರದಿಂದ ಗೆದ್ದು ಹಲವು ಬಾರಿ ಶಾಸಕರಾದವರು. ಇಂದು ಚುನಾವಣೆಗೆ ನಿಲ್ಲುವಾಗಲೇ ಕೋಟಿ ಬೇಕು. ಇಲ್ಲವೇ ಕೋಟಿ ಕಳ್ಳ ಹಣ ಹಾಕುವವರನ್ನು ಹಿಡಿಯಬೇಕು. ಗೆದ್ದ ಮೇಲೆ ಅವರು ಮಾಡುವುದು ಕೋಟಿ ಕೋಟಿ ಅಭಿವೃದ್ಧಿ ಹೆಸರಿನ ಸುಲಿಗೆ.

ಅದಾನಿ ದಶಕದಲ್ಲೇ ಸಾವಿರಾರು ಕೋಟಿಯ ಮಾಲಿಕ ಸುಮ್ಮನೆ ಆಗಲಿಲ್ಲ. ಕೇಂದ್ರದಲ್ಲಿ ಆಳುವವರ ಒಳಗೈ ನಾನಾ ಮೂಲದ ಹಣ ಅಲ್ಲಿ ಹೂಡಿಕೆ ಆಗಿದೆ. ಹಿಂದೆ ಕಾಂಗ್ರೆಸ್ಸನ್ನು ಹಿಡಿದುಕೊಂಡು ಅಂಬಾನಿ ಸಾಮ್ರಾಜ್ಯ ಬೆಳೆದಿತ್ತು. ಅದು ಬಿಜೆಪಿ ಗೆದ್ದಾಗ ಪಕ್ಷಾಂತರ ಮಾಡಿತು. ಕಾಂಗ್ರೆಸ್ಸಿನ ದಿಲ್ಲಿಯ ಆಳುತ್ತಿದ್ದವರಿಗೆ ಅಂಬಾನಿ ಲಿಂಕ್ ಮಾಡುತ್ತಿದ್ದ ದೇವುರಾ ಕೂಡ ಈಗ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ರಾಜಕಾರಣಿಗಳು ಮತ್ತು ಉದ್ಯಮಿಗಳ ಗೆಳೆತನ ಜನಸಾಮಾನ್ಯರ ಉದ್ಧಾರ ಮಾಡುವುದಿಲ್ಲ. ಈಗಂತೂ ಯಾರಾದರೊಬ್ಬರು ಉದ್ಯಮಿಯ, ಕಳ್ಳ ಕುಳದ ಕಿಸೆಯಲ್ಲಿ ಕುಳಿತುಕೊಳ್ಳದ ರಾಜಕಾರಣಿಯೇ ಇಲ್ಲ. ಏಕೆಂದರೆ ಓಟು ಕೇಳುವುದೆಂದರೆ ಖರ್ಚು, ಗೆದ್ದು ಬರುವುದೆಂದರೆ ಕೋಟಿ ಕೋಟಿ ರೂಪಾಯಿ. ಅದನ್ನು ಬಡ್ಡಿ ಸಮೇತ ವಸೂಲು ಮಾಡದವನು ರಾಜಕಾರಣಿ ಆಗಲಾರ. ಸತತ ಸೋತು ಕೆಲವರು ಒಂದಷ್ಟು ಕಳೆದುಕೊಂಡುದಿದೆ. ಎಲ್ಲ ಅಲ್ಲ ಎಂಬುದನ್ನು ನೆನಪಿಡಿ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರೇ ಚುನಾವಣಾ ಆಯೋಗಕ್ಕೆ ನೀಡಿದ ಲೆಕ್ಕದಂತೆ ಎಲ್ಲ ಸಂಸದರ ಲಕ್ಷಗಳೂ ಕೋಟಿ ಕೋಟಿ ಆಗಿವೆ. ಆ ಲೆಕ್ಕದಂತೆ ಕರ್ನಾಟಕದ ಜಿಗಜಿಣಗಿ ಬಳಿಕ ಎರಡನೆಯ ಸ್ಥಾನದಲ್ಲಿ ಬಿಜೆಪಿ ಸಂಸದೆ ಮನೇಕಾ ಗಾಂಧಿಯವರು ಇದ್ದಾರೆ. 2004ರಲ್ಲಿ 6.66 ಕೋಟಿ ಇದ್ದ ಅವರ ಸಂಪತ್ತು 2019ರಲ್ಲಿ 55.69 ಕೋಟಿ ರೂಪಾಯಿಗೆ ಏರಿಕೆ ಎಂದರೆ 735 ಶೇಕಡಾ ಏರಿಕೆ ಕಂಡಿದೆ.

2004ರಿಂದ ನಿರಂತರ ಗೆದ್ದ ಬಿಜೆಪಿಯ 5 ಮಂದಿ ಸಂಸದರು ಕರ್ನಾಟಕದಲ್ಲಿ ಮಾತ್ರ ಇದ್ದಾರೆ. ಬೇರೆ ಯಾವುದೇ ರಾಜ್ಯದಲ್ಲಿ ಈ ನಡುವೆ ನಿರಂತರ ಗೆದ್ದ ಸಂಸದರ ಸಂಖ್ಯೆ ಇಷ್ಟು ಇಲ್ಲ. ಎಲ್ಲ ಸಂಸದರ ಸಂಪತ್ತು ನೂರಾರು ಪಟ್ಟು ಹೆಚ್ಚಾಗಿರುವುದಂತೂ ಸತ್ಯ. ಮನುಷ್ಯ ಎಂದ ಮೇಲೆ ಬೆಳೆಯಬೇಕು. ರಾಜಕಾರಣಿಗಳ ಪ್ರಕಾರ ಬೆಳೆಯುವುದು ಎಂದರೆ ಸಂಪತ್ತು ಬೆಳೆಸುವುದು. ಅದಕ್ಕೆ ಯಾವ ದಾರಿಯಾದರೂ ಸರಿ.

ದಾವಣಗೆರೆಯ ಬಿಜೆಪಿ ಸಂಸದ ಜಿ. ಎಂ. ಸಿದ್ದೇಶ್ವರ ಅವರ ಸಂಪತ್ತು ಈ ಅವಧಿಯಲ್ಲಿ 5.2 ಕೋಟಿಯಿಂದ 31.01 ಕೋಟಿಗೆ ಎಂದರೆ 656 ಶೇಕಡಾ ಹೆಚ್ಚಾಗಿದೆ. ಬಿಜೆಪಿ ಸಂಸದ ಸದಾನಂದ ಗೌಡರ ಸಂಪತ್ತು ಈ ಅವಧಿಯಲ್ಲಿ 46.39 ಲಕ್ಷ ರೂಪಾಯಿಯಿಂದ 20.93 ಕೋಟಿಗೆ ಎಂದರೆ 4,413 ಶೇಕಡಾ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿಯವರ ಸಂಪತ್ತು 77.60 ಲಕ್ಷದಿಂದ 11.13 ಕೋಟಿ ರೂಪಾಯಿಗೆ ಎಂದರೆ 1,135 ಶೇಕಡಾ ಏರಿದೆ. ಈ ಅವಧಿಯಲ್ಲಿ ಬಿಜೆಪಿಯ ಸಂಸದ ಅನಂತಕುಮಾರ್ ಹೆಗ್ಡೆ ಸಂಪತ್ತು 12.06 ಲಕ್ಷ ರೂಪಾಯಿಯಿಂದ 8.47 ಕೋಟಿಗೆ ಎಂದರೆ 6,928 ಶೇಕಡಾ ಅಧಿಕರಿಸಿದೆ. ಬಾಗಲಕೋಟೆ ಸಂಸದ ಗದ್ದೀಗೌಡರ ಸಂಪತ್ತು 53.75 ಲಕ್ಷದಿಂದ 4.3 ಕೋಟಿ ರೂಪಾಯಿಗೆ ಎಂದರೆ 718 ಶೇಕಡಾ ಹೆಚ್ಚಿದೆ.

ರಾಹುಲ್ ಗಾಂಧಿಯವರ ಸಂಪತ್ತು 55.38 ಕೋಟಿಯಿಂದ 18.58 ಕೋಟಿ ರೂಪಾಯಿಗೆ ಎಂದರೆ 2,769 ಶೇಕಡಾ ಹೆಚ್ಚಾಗಿದೆ. ಸಂಪತ್ತು ಕಳೆದುಕೊಂಡ ಸಂಸದರು ಒಬ್ಬರು ಕೂಡ ಇಲ್ಲ. ಸಂಸದ ಎಂಬುದನ್ನು ಸ್ಪಲ್ಪ ಮಾತ್ರ ತಿದ್ದಿದರೆ ಸಂಪದರು ಆಗುತ್ತದೆ. ರಾಜಕೀಯ ಇಂದು ಸಂಪಾದನೆಗೆ ದಾರಿ.

ನಮ್ಮೂರಿನ ಒಂದು ಪಂಚಾಯತ್‍ನಲ್ಲಿ ಅರುವತ್ತು ವರುಷಗಳ ಹಿಂದೆ ಹೆಸರಿಗೆ ಕೊರಗ ಸಮುದಾಯದ ಒಬ್ಬರನ್ನು ಪಂಚಾಯತ್ ಸದಸ್ಯರಾಗಿಸಿದ್ದರು. ಸಭೆ ನಡೆಯುವಾಗ ಅವರನ್ನು ಹೊರಗೆ ಕೂರಿಸುತ್ತಿದ್ದರು. ಈಗಿನ ಪಂಚಾಯತ್ ಸದಸ್ಯರನ್ನು ನೋಡಿ. ಅವರು ಸಂಪತ್ತು ಏರಿಸಿಕೊಳ್ಳುವುದರಲ್ಲಿ ಮರಿ ಸಂಸದರೇ ಆಗಿದ್ದಾರೆ.

Related Posts

Leave a Reply

Your email address will not be published.