ಯುವಕರಿಂದ ಸಮಾಜ ಕಟ್ಟುವ ಕೆಲಸವಾಗಲಿ: ಸ್ಪೀಕರ್ ಯು.ಟಿ. ಖಾದರ್

ಪುತ್ತೂರು: ಯುವಕರು ಸಮಾಜ ಕಟ್ಟಬೇಕು ಹೊರತು ಬಿಕ್ಕಟ್ಟು ಸೃಷ್ಠಿಸಬಾರದು. ಅದೇ ರೀತಿ ಸಮಸ್ಯೆಯನ್ನು ಬಗೆಹರಿಸಬೇಕು ಹೊರತು ಸಮಸ್ಯೆಯನ್ನು ಸೃಷ್ಠಿಸುವ ಕೆಲಸ ಮಾಡಬಾರದು ಎಂದು ನೂತನ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಅವರು ಪುತ್ತೂರಿನ ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಪುರಭವನದಲ್ಲಿ ನೂತನ ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಯುವ ಸಮುದಾಯ ಉತ್ತಮ ನಡೆಯೊಂದಿಗೆ ಮುಂದುವರಿದಲ್ಲಿ ಸಮಾಜ ನಿಮ್ಮ ಹಿಂದೆ ಬರುತ್ತದೆ. ಮುಂದಿನ ಪೀಳಿಗೆ ಸೌಹಾರ್ಧಯುತ ಯೋಗ್ಯ ಬದುಕು ಕಲ್ಪಿಸುವ ಕೆಲಸ ಮಾಡದಿದ್ದಲ್ಲಿ ಸಮಾಜ ಎಂದಿಗೂ ನಮ್ಮನ್ನು ಕ್ಷಮಿಸಲಾರದು. ಮುಸ್ಲಿಂ ಸಮುದಾಯ ಒಕ್ಕೂಟವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೆ ಎಲ್ಲರ ನೋವು ಅನ್ಯಾಯಗಳಿಗೂ ಸ್ಪಂಧಿಸುವ ಕೆಲಸ ಮಾಡಬೇಕು. ದುಷ್ಟತನ ಮುಕ್ತ ಮತ್ತು ಧ್ವೇಷ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಘಟನೆ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದ ಅವರು ಟೀಕೆ ಟಿಪ್ಪಣಿಗಳು ಸ್ವಾಭಾವಿಕ ಇದೊಂದು ಪ್ರಜಾಪ್ರಭುತ್ವದ ಸೌಂದರ್ಯ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಹಿಂದೂ ಮತ್ತು ಮುಸ್ಲಿಮರ ನಡುವೆ ಅಗಾಧವಾಗಿದ್ದ ಪ್ರೀತಿ ಇದೀಗ ರಾಜಕೀಯ ಕಾರಣಕ್ಕಾಗಿ ದೂರವಾಗಿದೆ. ಯುವ ಸಮುದಾಯದಲಿ ವಿಷಬೀಜ ಬಿತ್ತಲಾಗುತ್ತಿದೆ. ಇದನ್ನು ತಡೆಯುವಲ್ಲಿ ಎಲ್ಲಾ ಧರ್ಮಗುರುಗಳು ಪ್ರಯತ್ನ ನಡೆಸಬೇಕಾಗಿದೆ. ನಾನು ಸಹಾಯ ಮಾಡುತ್ತಿರುವ ಸಂದರ್ಭದಲ್ಲಿ ಎಂದೂ ಪಕ್ಷ, ಜಾತಿ, ಧರ್ಮಗಳನ್ನು ನೋಡಿಲ್ಲ. ಎಲ್ಲಾ ಬಡವರಿಗೂ ಕೈಲಾದ ಸಹಾಯ ಮಾಡಿದ್ದೇನೆ. ಮುಸ್ಲಿಂ ಧರ್ಮದವರು ಯಾರನ್ನೂ ವಿರೋಧಿಸುವವರಲ್ಲ. ಬದಲಿಗೆ ಎಲ್ಲರನ್ನೂ ಪ್ರೀತಿಸುವವರು ಅವರಿಗೆ ಅದೇ ಪ್ರೀತಿಯನ್ನು ಹಿಂದಿರುಗಿಸುವ ಕೆಲಸವಾದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ನಾನು ಎಲ್ಲಾ ಜಾತಿ ಧರ್ಮಗಳನ್ನು ಒಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುನೀರ್ ಅವರು ಮುಸ್ಲಿಂ ಸಮುದಾಯಕ್ಕೆ ಓಲೈಕೆ ಬೇಕಾಗಿಲ್ಲ. ಆದರೆ ನಮ್ಮನ್ನು ಪರಿಗಣಿಸಿ, ತಪ್ಪು ಮಾಡಿದರೆ ಬೆಂಬಲ ನೀಡಬೇಕಾಗಿಲ್ಲ. ಆದರೆ ನಮ್ಮನ್ನು ಬೇರೆಯಾಗಿರಿಸುವ ಕೆಲಸ ಮಾಡಬೇಡಿ. ಜಿಲ್ಲೆಯಲ್ಲಿ ಎಲ್ಲವೂ ಸಿಗುತ್ತದೆ ಆದರೆ ಸಾಮಾಜಿಕ ಸಾಮರಸ್ಯದ ಕೊರತೆಯಿದೆ ಅದನ್ನು ಇಲ್ಲಿನ ಶಾಸಕರು ಬದಲಾಯಿಸುವ ಮೂಲಕ ನೀಗಿಸಬೇಕು ಎಂದರು.

ವೇದಿಕೆಯಲ್ಲಿ ಅಧ್ಯಕ್ಷ ರಿಯಾಜ್ ಪರ್ಲಡ್ಕ,ದುವಾ ನೆರವೇರಿಸಿದ ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಮುರರಿಸ್ ಸೆಯ್ಯದ್ ಅಹ್ಮದ್ ಪೂಕೋಯ ತಂಙಳ್ ಮಹಮ್ಮದ್ ಬಡಗನ್ನೂರು,ಶರೀಫ್ ಬಲ್ನಾಡ್,ಬಾತಿಷ್ ಅಳಕೆಮಜಲು, ಕಾವು ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಎಡ್ವೊಕೇಟ್ ಹನೀಫ್ ಹುದವಿ, ಕಂಬಳಬೆಟ್ಟು ಜನಪ್ರಿಯ ಶಿಕ್ಷಣ ಸಂಸ್ಥೆಯ ಎಂಡಿ ಡಾ. ಬಿ.ಕೆ. ಅಬ್ದುಲ್ ಬಶೀರ್, ಮಾಜಿ ಜಿ.ಪಂ ಸದಸ್ಯ ಎಂ.ಎಸ್. ಮಹಮ್ಮದ್,  ಹಲವಾರು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನೇತಾರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.