“ಶಿವಾರತಿ”ಗೆ ಸಜ್ಜಾಗಿದೆ ಶಿವಪಾಡಿ : ಸಾಗುತ್ತಿದೆ 9ನೇ ದಿನದ ಅತಿರುದ್ರ ಮಹಾಯಾಗದ ಪೂಜಾ ಕಾರ್ಯಗಳು

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಒಂಬತ್ತನೇ ದಿನ ಮಾರ್ಚ್ 02, 2023 ರ ಗುರುವಾರದಂದು ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ಶತಚಂಡಿಕಾ ಯಾಗಮಂಟಪದಲ್ಲಿ ಶತಚಂಡಿಕಾ ಯಾಗ, ಪೂರ್ಣಾಹುತಿ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಶ್ರೀ ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನೆರವೇರಿತು. ಇಂದು ನಡೆಯುತ್ತಿರುವ 9ನೇ ದಿನದ ಅತಿರುದ್ರ ಮಹಾಯಾಗದಲ್ಲಿ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಶ್ರೀ ಉಮಾಮಹೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿ, ಮಧ್ಯಾಹ್ನದ ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಇದರೊಂದಿಗೆ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ ಜರುಗಿತು.


ಸಂಜೆ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿದ್ದು, ವಿಶೇಷವೆಂಬಂತೆ ಸಂಜೆ 7 ಗಂಟೆಯಿಂದ ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ವಾರಣಾಸಿಯ ಪಂಡಿತರಿಂದ “ಶಿವಾರತಿ” ನಡೆಯಲಿದೆ. ಶಿವಾರತಿಗಾಗಿ ವೇದಿಕೆಯು ಸಂಪೂರ್ಣವಾಗಿ ಸಜ್ಜುಗೊಂಡಿದ್ದು, ವಾರಣಾಸಿಯ ಪಂಡಿತರಿಗಾಗಿ ಕಾಯುವಂತಿದೆ. ಸಹಸ್ರಾರು ಮಂದಿ ಭಕ್ತಾದಿಗಳು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತಿ ಮತ್ತು ಕಾತುರದಿಂದ ಕಾಯುತ್ತಿದ್ದಾರೆ. ಈ “ಶಿವಾರತಿ” ಮಾರ್ಚ್ 04 ರವರೆಗೆ ಸಂಜೆ 7 ಗಂಟೆಗೆ ಶಿವಪಾಡಿ ಶ್ರೀ ಉಮಾಮಹೇಶ್ವರ ಸನ್ನಿಧಾನದಲ್ಲಿ ನಡೆಯಲಿದೆ.
