ಇಂಡಿಯ ಮೈತ್ರಿಗೆ ಮುತ್ತಡೆ

ಇಂಡಿಯಾ ಮೈತ್ರಿ ಕೂಟದ ಕ್ಷೇತ್ರ ಹಂಚಿಕೆಯು ಪಡುವಣ ಬಂಗಾಳ ಮತ್ತು ಪಂಜಾಬಗಳಲ್ಲಿ ಒಂದು ಸಮಸ್ಯೆ ಆಗಿದೆ. ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪಶ್ಚಿಮ ಬಂಗಾಳದ 42 ಮತ್ತು ಪಂಜಾಬಿನ 13 ತಮ್ಮ ಆಸ್ತಿ ಎಂದು ನಂಬಿವೆ. ಬಹು ಕಾಲ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳು ಬಂಗಾಳದ್ದು ಮತ್ತು ಪಂಜಾಬಿನದು ತಮ್ಮ ಆಸ್ತಿ ಎಂದು ತಿಳಿದಿದ್ದವು. ಆ ಕಾಲವೆಲ್ಲ ಬದಲಾಗಿರುವುದು ಚರಿತ್ರೆ. ಮಮತಾ ಬ್ಯಾನರ್ಜಿಯವರು ರಾಜೀವ್ ಗಾಂಧಿಯವರ ಮೂಲಕ ಕಾಂಗ್ರೆಸ್ ಹೊಕ್ಕು ಆಮೇಲೆ ತೃಣಮೂಲ ಮಾಡಿದವರು. ಅರವಿಂದ ಕೇಜ್ರೀವಾಲ್‍ರು ಕಾಂಗ್ರೆಸ್ ಸರಕಾರಗಳ ವಿರುದ್ಧದ ರಾಜಕೀಯ ಹೋರಾಟದಲ್ಲಿ ನಾಯಕರಾಗಿ ಎದ್ದವರು. ಈಗಿನ ರಾಜಕೀಯ ಸನ್ನಿವೇಶದಲ್ಲಿ ಮಮತಾ ಮತ್ತು ಕೇಜ್ರೀವಾಲರಿಗೆ ಬಿಜೆಪಿ ವಿರುದ್ಧ ಹೋರಾಡಲೇ ಬೇಕಾಗಿದೆ. ದಿಲ್ಲಿಯಲ್ಲಿ ಕೇಜ್ರೀವಾಲರನ್ನು ಮೋದಿ ಸರಕಾರದ ಪೆÇೀಲೀಸರು ಮತ್ತು ಲೆಫ್ಟಿನೆಂಟ್ ಗವರ್ನರ್‍ರು ನಿತ್ಯ ಕಾಡುತ್ತಿದ್ದಾರೆ. ಮಮತಾರ ಗೆಲುವು ಸಂಘೀ ಕೂಟ ಎದುರಿಸುವುದರಲ್ಲಿ ಇದೆ. ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದ ಎರಡು ಲೋಕ ಸಭಾ ಸ್ಥಾನಗಳನ್ನು ಟಿಎಂಸಿ ಕಿತ್ತುಕೊಂಡಿತ್ತು. ಇಂಡಿಯಾ ಮೈತ್ರಿ ಕೂಟದಲ್ಲಿ ಹೀಗಾಗಿ ಅವರು ಇದ್ದಾರೆ. ಆದರೆ ಅವರದು ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

ಮೈತ್ರಿ ಕೂಟ ಎನ್ನುವುದು ಬಹಳ ಪುರಾತನ ಕಾಲದಿಂದಲೂ ಇತಿಹಾಸ ಮಾತ್ರವಲ್ಲ, ಪುರಾಣಗಳಲ್ಲೂ ಕಂಡುಬಂದಿದೆ. ಇದು ಪ್ರಪಂಚದ ಎಲ್ಲ ನಾಗರಿಕತೆ ಪುರಾಣಗಳಿಗೂ ಅನ್ವಯಿಸುತ್ತದೆ. ರಾಮನು ವಾಲಿಯನ್ನು ಮರೆಯಲ್ಲಿ ನಿಂತು ಕೊಂದು ಸುಗ್ರೀವನಿಗೆ ಪಟ್ಟ ಕಟ್ಟಿದ. ಇದು ವಿಭೀಷಣನು ಅಣ್ಣನ ವಿರುದ್ಧ ಮಾತನಾಡಿ ರಾಮನ ಕಡೆ ಸೇರಿಕೊಳ್ಳುವಂತೆ ಮಾಡಿತು. ಸೇನಾ ಗುಟ್ಟು ಹೇಳಿ ರಾಮ ಪಡೆಯ ಗೆಲುವಿಗೆ ಕಾರಣನಾದ ವಿಭೀಷಣ ಅದಕ್ಕೆ ಕಪ್ಪವಾಗಿ ಲಂಕಾ ಪಟ್ಟ ಪಡೆದ. ಕುರುಕ್ಷೇತ್ರ ಯುದ್ಧದ ವೇಳೆ ಪಾಂಡವರು ಮತ್ತು ಕೌರವರು ತಮ್ಮ ಸೇನೆಗೆ ಇತರ ಅರಸರನ್ನು ಸೇರಿಸಿಕೊಳ್ಳಲು ನಡೆಸಿದ ದೊಡ್ಡ ವಿವರವಿದೆ. ಟಿಪ್ಪು ಸುಲ್ತಾನ್ ವಿರುದ್ಧದ ಯುದ್ಧದಲ್ಲಿ ಕಿತ್ತೂರು ಸಂಸ್ಥಾನವು ಬ್ರಿಟಿಷ್ ಸೇನೆಯ ಒಂದು ಭಾಗವಾಗಿತ್ತು. ಮುಂದೆ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮವಾಯಿತು. ಬ್ರಿಟಿಷರ ಬಾಲ ಹಿಡಿದ ಹೈದರಾಬಾದ್, ಮೈಸೂರು ಸಂಸ್ಥಾನಗಳು ಉಳಿದವು. ಟಿಪ್ಪು ಮೊದಲಾದವರು ಅಳಿದರು. ಪೆÇೀರ್ಚುಗೀಸರು ಮಂಗಳೂರು ಪಡೆದಾಗ ಬಂಗ ಗಂಡ ಯೂರೋಪಿಯನರ ಕಡೆ ಇದ್ದರೆ ಹೆಂಡತಿ ಅಬ್ಬಕ್ಕರು ಪೆÇೀರ್ಚುಗೀಸರ ವಿರುದ್ಧ ಹೋರಾಡಿದರು.

ತುರ್ತು ಪರಿಸ್ಥಿತಿಯು ಪ್ರತಿ ಪಕ್ಷಗಳಿಗೆ ಒಂದಾಗಲೇ ಬೇಕಾದ ಸನ್ನಿವೇಶ ಸೃಷ್ಟಿಸಿತ್ತು. ಆಗ ಜನತಾ ಹುಟ್ಟಿತು. ಅದರಲ್ಲಿ ಅವರೆಲ್ಲ ವಿರೋಧಿಸುತ್ತಿದ್ದ ಜನಸಂಘವೂ ಇತ್ತು. ಜನತಾ ಗೆದ್ದಾಗ, ಹಿಂದೆ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ, ಉಪ ಪ್ರಧಾನಿ ಎಲ್ಲ ಆಗಿದ್ದ ಮೊರಾರ್ಜಿ ದೇಸಾಯಿಯವರೆ ಪ್ರಧಾನಿ ಆದರು. ಕರ್ನಾಟಕದಲ್ಲಿ 1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ ಬಂದಾಗಲೂ ಹಿಂದಿನ ಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆದ ರಾಮಕೃಷ್ಣ ಹೆಗಡೆ ಸಹ ಮೊದಲು ಕಾಂಗ್ರೆಸ್ಸಿನಲ್ಲಿ ಮಂತ್ರಿ ಗಿಂತ್ರಿ ಆಗಿದ್ದವರು. ದೇಶದಲ್ಲಿ ಜನತಾ ಪಕ್ಷ ಬಿಜೆಪಿಗೆ ಕಾರಣವಾಯಿತು. ಮೊರಾರ್ಜಿ ಸರಕಾರದಲ್ಲಿ ವಾಜಪೇಯಿ, ಅಡ್ವಾಣಿ ಮಂತ್ರಿಗಳಾಗಿ ಅನುಭವಿಸಿ ಜನಸಂಘದ ಅಂಗಿ ಕಳಚಿ ಭಾರತೀಯ ಜನತಾ ಪಕ್ಷ ಎಂದರು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ, ಎಚ್. ಡಿ. ಕುಮಾರಸ್ವಾಮಿ ಬಿಜೆಪಿಗೆ ನೀರೆರೆದರು. ಗೋವಾದಲ್ಲಿ ಮಾರಿಕೊಂಡ ಕಾಂಗ್ರೆಸ್ಸಿನ ಕ್ರಿಶ್ಚಿಯನ್, ಕೊಂಕಣಿ ನಾಯಕರು ಬಿಜೆಪಿ ಗೆಲ್ಲಿಸಿದರು. ಹೀಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಕತೆ. ಮಂಗಳೂರಿನಲ್ಲಿ ಜೆ. ಆರ್. ಲೋಬೋ ವಿರುದ್ಧ ಕಾಂಗ್ರೆಸ್ಸಿನ ಮಾಜೀ ಮಂತ್ರಿ ಒಬ್ಬರು ಕಮ್ಯೂನಿಸ್ಟ್ ಒಬ್ಬರನ್ನು ಕಾಸು ಕೊಟ್ಟು ನಿಲ್ಲಿಸಿದ್ದರು. ಮುಗಿಯದ ಕತೆ.

ವರುಷದ ಹಿಂದೆ ತೆಲಂಗಾಣದ ಮುಖ್ಯಮಂತ್ರಿ ಆಗಿದ್ದ ಕೆ. ಚಂದ್ರಶೇಖರ ರಾವ್ ತೆಲಂಗಾಣ ರಾಷ್ಟ್ರ ಸಮಿತಿ ಮಾಡಿದರು. ಆಗ ಕಾಂಗ್ರೆಸ್ ಹೊರತಾದ ಬೇರೆಲ್ಲ ವಿರೋಧ ಪಕ್ಷಗಳ ಒಕ್ಕೂಟ ಎಂದರು. ಅದಕ್ಕೆ ಕಾರಣ ರಾಜ್ಯದಲ್ಲಿ ಅವರ ಪ್ರಮುಖ ಪ್ರತಿ ಪಕ್ಷ ಕಾಂಗ್ರೆಸ್. ಭಾರತದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಇಲ್ಲದ ರಾಷ್ಟ್ರೀಯ ಮೈತ್ರಿಕೂಟ ಸಾಧ್ಯವಿಲ್ಲ. ದೇಶದೆಲ್ಲೆಡೆ ಆ ಎರಡು ಪಕ್ಷಗಳು ಮಾತ್ರ ಇವೆ. ಒಮ್ಮೆ ಕೂಡ ಬಹುಮತ ಪಡೆಯದ ಬಿಜೆಪಿಯು ಕರ್ನಾಟಕದಲ್ಲಿ ಮೂರು ಬಾರಿ ಖರೀದಿ ಸರಕಾರ ನಡೆಸಿತು. ಒಂದು ಬಾರಿ ಕೂಡ ಬಹುಮತ ಪಡೆಯದ ಜೆಡಿಯುನ ನಿತೀಶ್ ಕುಮಾರ್ ಆಚೀಚೆ ಹಾರಿ 20 ವರುಷದಿಂದ ಬಿಹಾರದ ಮುಖ್ಯಮಂತ್ರಿ ಆಗಿರುವರು. ರಾಜಕೀಯ ಎಷ್ಟು ಹೊಂದಾಣಿಕೆಯ ನಾಟಕದ್ದು ನೋಡಿ. ಕೇರಳದಲ್ಲಿ ಅರ್ಧ ಶತಮಾನದಿಂದಲೂ ಮೈತ್ರಿ ಕೂಟ ಸರಕಾರಗಳು ಇವೆ. ಈಗಾಗಲೇ ಬಿಜೆಪಿಯ ಎನ್‍ಡಿಎ ಮತ್ತು ಆಗಿನ ಕಾಂಗ್ರೆಸ್ಸಿನ ಯುಪಿಎ ಈಗಿನ ಇಂಡಿಯಾ ಮೈತ್ರಿ ಕೂಟದಲ್ಲಿ ಸಾಕಷ್ಟು ಪಕ್ಷಗಳು ಇವೆ. ಆದರೆ ಅವುಗಳ ಸಂಖ್ಯೆ ಸ್ಥಿರವಲ್ಲ. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಡುವಣ ಬಂಗಾಳ ಬಿಟ್ಟರೆ ಸ್ಪರ್ಧಿಸಬಹುದಾದ ರಾಜ್ಯ ತ್ರಿಪುರಾ ಮಾತ್ರ. ಆಮ್ ಆದ್ಮಿ ಪಕ್ಷವು ದಿಲ್ಲಿ, ಪಂಜಾಬ್ ಹೊರತಾಗಿ ಸ್ಪರ್ಧಿಸಬಹುದಾದ ರಾಜ್ಯ ಹರಿಯಾಣ ಮಾತ್ರ. ಆದ್ದರಿಂದ ಅವರಿಗೆ ಮುಖ್ಯವಾಗಿ ತಮ್ಮ ನೆಲೆಯ ಮೋಹ ಇದೆ.

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಸಿಂಗ್ ಯಾದವ್‍ರು ಜಯಂತ್ ಚೌಧರಿ ಅವರ ಆರ್‍ಎಲ್‍ಡಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಪಕ್ಷಕ್ಕೆ ಪಡುವಣ ಉತ್ತರ ಪ್ರದೇಶದ 7 ಲೋಕ ಸಭಾ ಕ್ಷೇತ್ರ ಬಿಟ್ಟಿದ್ದಾರೆ. 80 ಲೋಕ ಸಭಾ ಕ್ಷೇತ್ರದ ಉತ್ತರ ಪ್ರದೇಶದಲ್ಲಿ ಮಾತ್ರ ತಾನು ಸಿಂಹ ಎನ್ನುವುದು ಅಖಿಲೇಶ್‍ರಿಗೆ ಗೊತ್ತಿದೆ. ಅದಕ್ಕಾಗಿ ಇತರ ಪಕ್ಷಗಳನ್ನು ಅಲೆದಾಡಿಸುತ್ತಾರೆ. ಮಾಯಾವತಿಯವರು ಕೇಂದ್ರೀಯ ತನಿಖಾ ದಳಗಳವರ ದಾಳಿಗೆ ರಾಜಿ ಮಾಡಿಕೊಂಡು ಒಂಟಿ ಒಳ ರಾಜಕೀಯಕ್ಕೆ ಗಂಟು ಬಿದ್ದಿದ್ದಾರೆ. ಎರಡು ಪ್ರಮುಖ ಪಕ್ಷಗಳಾದ ಬಿಜೆಪಿಗೆ 300ರಷ್ಟು ಲೋಕ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಷ್ಟವಿಲ್ಲ. ಕಾಂಗ್ರೆಸ್ಸಿಗೂ ಕಷ್ಟವಿಲ್ಲವಾದರೂ ಅದು ಕೆಲವರಿಗೆ ಇಷ್ಟವಿಲ್ಲ. ಮುಂದಿನ ಲೋಕ ಸಭೆ ಪಕ್ಕಾ ಅತಂತ್ರ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.