ವಿಶ್ವ ಮೂತ್ರಪಿಂಡ ಖಾಯಿಲೆಗಳ ದಿನದ ಪ್ರಯುಕ್ತ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

ವಿಶ್ವ ಮೂತ್ರಪಿಂಡ ಖಾಯಿಲೆಗಳ ದಿನದ ಪ್ರಯುಕ್ತ ಮಾರ್ಚ್ 09, 2023 ರ ಗುರುವಾರದಂದು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೂತ್ರಪಿಂಡ ಖಾಯಿಲೆಗಳ ತಜ್ಞ ವೈದ್ಯರಾದ ಡಾ. ಮೇಘಾ ಪೈ ರವರ ನೇತೃತ್ವದಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗಾಗಿ ಬೃಹತ್ ಉಚಿತ ಮೂತ್ರಪಿಂಡದ ಖಾಯಿಲೆಗಳ ತಪಾಸಣಾ ಶಿಬಿರ ನಡೆಯಿತು. ಈ ಕಾರ್ಯಕ್ರಮವನ್ನು ಉಡುಪಿ ಆದರ್ಶ ಆಸ್ಪತ್ರೆಯ ಖ್ಯಾತ ನೆಫ್ರೊಲೊಜಿಸ್ಟ್ ಡಾ. ಮೇಘಾ ಪೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಶ್ವ ಮೂತ್ರಪಿಂಡ ಖಾಯಿಲೆಗಳ ದಿನ ಕೇವಲ ಆಚರಣೆಯಲ್ಲ. ಇದೊಂದು ಜಾಗೃತಿ ಅಭಿಯಾನವಾಗಿದೆ. ನಾವಿಂದು ಡಯಾಲಿಸಿಸ್ ರೋಗಿಗಳಿಗೆ ಕ್ಯಾಂಪ್ ಮಾಡಿ, ಅವರಲ್ಲಿ ಮೂತ್ರಪಿಂಡದ ಕುರಿತಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ ಎಂದು ಸರ್ವರಿಗೂ ವಿಶ್ವ ಮೂತ್ರಪಿಂಡ ಖಾಯಿಲೆಗಳ ದಿನದ ಶುಭ ಕೋರಿದರು. ನಂತರ ಮಾತನಾಡಿದ ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯಕೀಯ ನಿರ್ದೇಶಕರಾದ ಡಾ. ಜಿ. ಎಸ್. ಚಂದ್ರಶೇಖರ್, ಡಯಾಬಿಟಿಸ್, ರಕ್ತದೊತ್ತಡ ಮತ್ತು ದೇಹದ ತೂಕವನ್ನು ನಿಯಂತ್ರಣಕ್ಕೆ ತರುವುದರಿಂದ ಡಯಾಲಿಸಿಸ್ ಪಡೆಯುವುದನ್ನು ಮತ್ತು ಅನಗತ್ಯ ಖರ್ಚನ್ನು ಕಡಿಮೆ ಮಾಡಬಹುದು. ಮೂತ್ರಪಿಂಡದ ಕುರಿತು ಡಯಾಲಿಸಿಸ್ ಚಿಕಿತ್ಸೆಗೆ ಒಳಪಟ್ಟ ರೋಗಿಗಳಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಉಚಿತವಾಗಿ ಕೆಲವೊಂದು ಪರೀಕ್ಷೆಗಳನ್ನು ಮಾಡಲು ಮುಂದಾದ ಡಾ. ಮೇಘಾ ಪೈ ಅವರನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ ಆದರ್ಶ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಶ್ರೀಕಾಂತ್ ಕೃಷ್ಣ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಮತ್ತು ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ರಕ್ತದ ಸಾಮಾನ್ಯ ಪರೀಕ್ಷೆಗಳು (CBC), ರಕ್ತದ ಸಕ್ಕರೆ ಅಂಶದ ಪರೀಕ್ಷೆ (RBS), ಮೂತ್ರಪಿಂಡ ಫಂಕ್ಷನ್ ಪರೀಕ್ಷೆ, ರಕ್ತದಲ್ಲಿನ ಸೋಡಿಯಂ ಮತ್ತು ಪೊಟ್ಯಾಸಿಯಂ, ಲಿವರ್ ಫಂಕ್ಷನ್ ತಪಾಸಣೆ, ಕ್ಯಾಲ್ಸಿಯಂ/ಪ್ರೋಸ್ಪರಸ್, ಯುರಿಕ್ ಆಸಿಡ್, ಇಸಿಜಿ ಹಾಗೂ ಹೃದಯದ ಸ್ಕ್ಯಾನಿಂಗ್ (ECHO), ಹೆಚ್.ಐ.ವಿ., ಹೆಚ್.ಬಿ.ಯಸ್.ಎ.ಜಿ, ಹೆಚ್.ಸಿ.ವಿ. ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳು ಅಧಿಕ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ, ಶಿಬಿರದ ಪ್ರಯೋಜನವನ್ನು ಪಡೆದರು.
