ಮತ ಯತ್ನದ ಭಾರತ ರತ್ನ 

ಭಾರತ ರತ್ನ ಪ್ರಶಸ್ತಿಯ ಬಗೆಗೆ ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಹೆಸರು ಸೂಚಿಸುತ್ತಾರೆ. ಅದಕ್ಕೆ ರಾಷ್ಟ್ರಪತಿ ಅವರು ಅಂಗೀಕಾರ ಮುದ್ರೆ ಒತ್ತುತ್ತಾರೆ. ಹಿಂದೆಲ್ಲ ಸಮಿತಿ ರಚನೆ, ಅಭಿಪ್ರಾಯ, ಮಂತ್ರಿ ಮಂಡಲದಲ್ಲಿ ಚರ್ಚೆ ಮೂಲಕ ಹೆಸರನ್ನು ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಿದ್ದರು. ಈಗ ಪ್ರಧಾನಿ ಮೋದಿಯವರು ಕಿಸೆಯಿಂದ ತೆಗೆದುಕೊಟ್ಟಂತೆ ಭಾರತ ರತ್ನ ಎಂದು ಸದ್ದು ಮಾಡಿದ್ದಾರೆ. ಕ್ರಮ ಪ್ರಕಾರ ಕರ್ಪೂರಿ ಠಾಕೂರ್, ಆಮೇಲೆ ಲಾಲ್ ಕೃಷ್ಣ ಅಡ್ವಾಣಿ, ಈಗ ಚೌಧರಿ ಚರಣ್ ಸಿಂಗ್, ಪಿ. ವಿ. ನರಸಿಂಹರಾವ್, ಎಂ. ಎಸ್. ಸ್ವಾಮಿನಾಥನ್‍ರಿಗೆ ಭಾರತ ರತ್ನ ಘೋಷಣೆ ಆಗಿದೆ. ಲೋಕ ಸಭೆ ಚುನಾವಣೆಗೆ ಮೊದಲು ಆದಷ್ಟು ವರ್ಗಗಳ ಮತ ಬುಟ್ಟಿಯನ್ನು ಬಾಚಿಕೊಳ್ಳಲು ಮೋದಿಯವರು ಲೆಕ್ಕಾಚಾರ ಹಾಕಿರುವುದು ಸ್ಪಷ್ಟವಿದೆ.

ಬಿಜೆಪಿಯದು ಎನ್‍ಡಿಎ ಎಂಬ ಕೂಟವಾದರೂ ಬಿಜೆಪಿ, ಪ್ರಧಾನಿ ಮೋದಿ ಇಷ್ಟೇ ಎಂಬಂತೆ ಪ್ರಚಾರ ಇದೆ. ಈಗ ಭಾರತ ರತ್ನ ಪಡೆಯುವವರು ಹಿಂದೆ ಪಡೆದವರನ್ನು ಗಮನಿಸಿದರೆ ಅರ್ಹರೇ ಆಗಿದ್ದಾರೆ. ಆದರೆ ಚುನಾವಣಾ ಕಾಲದ ಭಾವನಾತ್ಮಕ ಖರೀದಿ ಎಂದು ಕೂಡ ಇದನ್ನು ಕೆಲವರು ಕರೆಯಬಹುದು. ಭಾರತ ರತ್ನ ಅರ್ಧ ಶತಕ ಮೀರಿದರೆ ಅದರಲ್ಲಿ ಭಾರತ ರತ್ನ ಪಡೆದವರು ಅರ್ಧ ಪ್ರಮಾಣಕ್ಕಿಂತಲೂ ಹೆಚ್ಚು ಹಾರುವರು. ಮುಕ್ಕಾಲು ಪಾಲು ರಾಜಕೀಯ ನಾಯಕರು. ಈಗ ಕೂಡ ಪ್ರಮಾಣ ಅರ್ಧ ಇದೆ ಮತ್ತು ಮುಕ್ಕಾಲು ರಾಜಕೀಯ ವ್ಯಕ್ತಿಗಳೇ ಆಗಿದ್ದಾರೆ. ಯಾವುದೇ ಸರಕಾರ ಇದ್ದರೂ ಸಂಘ ಪರಿವಾರದವರು ಹೊಕ್ಕು ಬಳಸಿ ಅಡ್ಡ ದಾರಿಯಲ್ಲಿ ತಮ್ಮ ಕಾಲೂರುತ್ತಾರೆ.

ಭಾರತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಂಘ ಪರಿವಾರದವರಿಗೆ ಇಬ್ಬರ ಮೇಲೆ ಮಾತ್ರ ಪ್ರಭಾವ ಬೀರಲು ಸಾಧ್ಯ ಆಗಿರಲಿಲ್ಲ. ಅದು ಮಹಾತ್ಮಾ ಗಾಂಧೀಜಿ ಮತ್ತು ಜವಾಹರಲಾಲ್ ನೆಹರು. ಹಾಗಾಗಿ ಒಬ್ಬರನ್ನು ಕೊಂದು ಈಗಲೂ ಕೊಲ್ಲಲು ನೋಡಿ ಸಾಧ್ಯವಾಗದೆ ಗಾಂಧೀಜಿ ಪ್ರತಿಮೆಯ ಸುತ್ತ ಓಡಾಡಲು, ಕೂಡಲು ಆರಂಭಿಸಿದ್ದಾರೆ. ನೆಹರೂರನ್ನು ನಿತ್ಯ ತೆಗಳುತ್ತ ಯಾಕೆ ನಮ್ಮ ಗಾಳಕ್ಕೆ ತಾಳಕ್ಕೆ ಸಿಕ್ಕಿಲ್ಲ, ಅದಕ್ಕೆ ಈ ಅರ್ಚನೆ ಎನ್ನುತ್ತಿದ್ದಾರೆ. ಇಂದಿರಾ ಗಾಂಧಿಯವರ ವಿಷಯದಲ್ಲಿ ಸಂಘ ಪರಿವಾರ ಬೇರೆ ದಾರಿ ಕಂಡುಕೊಂಡಿತ್ತು. ಅವರು ಬದುಕಿರುವವರೆಗೆ ಅವರ ಕಾಲಡಿ ಬರುತ್ತ ದುರ್ಗೆ ಎಂದು ಕೂಡ ಹೊಗಳಿತ್ತು. ಇಂದಿರಾ ಮಕ್ಕಳಲ್ಲಿ ಒಬ್ಬರ ಕೊಲೆ, ಒಬ್ಬರ ಅಪಘಾತ. ಗಾಂಧೀಜಿಯ ಕೊಲೆಯ ಬಳಿಕದ ರಾಜಕೀಯ ವಿಚಿತ್ರವಾಗಿದೆ. ಒಂದು ಕಡೆ ಗೋಡ್ಸೆಯ ಪೂಜೆ, ಮತ್ತೊಂದು ಕಡೆ ಗಾಂಧೀಜಿಗೆ ನಮನದ ಮರ್ಜಿ.

ಸಿಂಧಿ ಎಲ್. ಕೆ. ಅಡ್ವಾಣಿ ಪಾಕಿಸ್ತಾನದಿಂದ ಬಂದು, ಮುಂಬಯಿಯಲ್ಲಿ ನೆಲೆಸಿ, ದಿಲ್ಲಿಗೆ ಹೋಗಿ ವಾಜಪೇಯಿ ಅವರ ಜೊತೆಯಾದವರು. ಸಂಘ ಪರಿವಾರ, ಜನಸಂಘ, ಬಿಜೆಪಿ ಇವುಗಳಲ್ಲಿ 1955ರಿಂದ 2010ರವರೆಗೂ ಈ ಇಬ್ಬರೇ ಅಗ್ರ ನಾಯಕರು. ಇವರ ರಥಯಾತ್ರೆ ಎಂಬ ರಾಜಕೀಯ ವಿಷಗಾಳಿ ಯಾತ್ರೆ ಬಿಜೆಪಿಯನ್ನು ಭಾರತದ ರಾಜಕೀಯದಲ್ಲಿ ಮುಂಚೂಣಿಗೆ ತರುವಲ್ಲಿ ಸಫಲವಾಗಿತ್ತು. ಆದರೆ ಅಡ್ವಾಣಿ ಅವರಿಗೆ ಕೊನೆಗಾದುದು ವನವಾಸ. ಈಗ ಭಾರತ ರತ್ನ ಎಂಬ ಸಮಾಧಾನಕರ ಕೊಡುಗೆ.

ಚರಣ್ ಸಿಂಗ್ ಜಾಟ್ ರೈತ ನಾಯಕರು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿದ್ದವರು. ಕಾಂಗ್ರೆಸ್ ಎದುರು ಎದ್ದು ನಿಂತವರು. ಉಪ ಪ್ರಧಾನಿ, ಪ್ರಧಾನಿ ಆದವರು. ಗೃಹ ಮಂತ್ರಿಯಾಗಿ 11 ಕಾಂಗ್ರೆಸ್ ಆಡಳಿತದ ರಾಜ್ಯಗಳನ್ನು ಒಮ್ಮೆಗೇ ಕಿತ್ತು ಹಾಕಿ ರಾಷ್ಟ್ರಪತಿ ಆಡಳಿತ ಹೇರಿದ್ದ ದಾಖಲೆ ಇವರದ್ದು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 1983ರಲ್ಲಿ ಮೊದಲು ಶಾಸಕರಾದುದು ಲೋಕ ದಳದ ಅಭ್ಯರ್ಥಿ ಎಂದು. ಈಗ ಭಾರತ ರತ್ನ. ಚರಣ್ ಸಿಂಗ್‍ರ ಮಗ ಅಜಿತ್ ಸಿಂಗ್ ಕಾಲದಲ್ಲಿ ಲೋಕ ದಳ ರಾಷ್ಟ್ರೀಯ ಲೋಕ ದಳ ಆಯಿತು. ಕೊನೆಗೆ ಅವರು ಒಮ್ಮೆ ಬಿಜೆಪಿ ಸೇರಿ ಕೇಂದ್ರದಲ್ಲಿ ಮಂತ್ರಿಯೂ ಅದರು. ಈಗ ಮೊಮ್ಮಗ ಜಯಂತ ಚೌಧರಿ ಕಾಲ. ಸಮಾಜವಾದಿ ಪಕ್ಷ ಕೊಟ್ಟಿರುವ 7 ಕ್ಷೇತ್ರವಲ್ಲದೆ ಇನ್ನಷ್ಟು ಕೊಡುವುದಾಗಿ ಬಿಜೆಪಿ ಜಯಂತ ಚೌಧರಿಯವರಿಗೆ ಆಮಿಶ ಒಡ್ಡಿತ್ತು. ಈಗ ಅಜ್ಜನಿಗೆ ಭಾರತ ರತ್ನ, ಮೊಮ್ಮಗನಿಗೆ ಚುನಾವಣಾ ಖರ್ಚು. ಇನ್ನೇನು ಬೇಕು.

ಪಿ. ವಿ. ನರಸಿಂಹರಾವ್ ಏನೂ ಮಾಡದ ಪ್ರಧಾನಿಯಂತೂ ಅಲ್ಲ. ಎರಡು ದಶಕದ ಬಳಿಕ ಐದು ವರುಷ ದೃಢ ಸರಕಾರ ನೀಡಿದವರು. ಭಾರತದ ಇಂದಿನ ಹಣಕಾಸು ಗಟ್ಟಿತನಕ್ಕೆ ಮನಮೋಹನ್ ಸಿಂಗ್ ಅವರ ಮೂಲಕ ತಳಪಾಯ ಹಾಕಿದವರು. ಆಂಧ್ರದಲ್ಲಿ ಮುಖ್ಯಮಂತ್ರಿ ಎಂದು ಕಾಂಗ್ರೆಸ್ಸಿನಲ್ಲಿ ಎಲ್ಲ ಮಟ್ಟದ ಅಧಿಕಾರ ಅನುಭವಿಸಿದವರು.

ಎಂ. ಎಸ್. ಸ್ವಾಮಿನಾಥನ್ ಎಂಬ ಕೃಷಿ ವಿಜ್ಞಾನಿ ಕಾಂಗ್ರೆಸ್ ಪಕ್ಷದ ಶೊಧ. ಭಾರತದ ಆಹಾರ ಕೊರತೆಯನ್ನು ನೀಗಲು ಕಾಂಗ್ರೆಸ್ಸಿನ ಹಸಿರು ಕ್ರಾಂತಿಯನ್ನು ಸಾಕಾರ ಮಾಡಿದವರು. ಹಲವು ಸುಧಾರಿತ ಭತ್ತದ ತಳಿಗಳ ಮೂಲಕ ಭಾರತದಲ್ಲಿ ಅಕ್ಕಿಯ ಸ್ವಾವಲಂಬನೆಗೆ ಕಾರಣರಾದವರು. ಈ ಬಾರಿಯ ಭಾರತ ರತ್ನದಲ್ಲಿ ರಾಜಕೀಯದ ಆಚಿನವರು ಇವರೊಬ್ಬರು ಎನ್ನುವಂತಿಲ್ಲ. ರಾಜ್ಯ ಸಭಾ ಸದಸ್ಯತ್ವ, ಇನ್ನಿತರ ಹುದ್ದೆ ಕಂಡವರು.

ಭಾರತ ರತ್ನ ಪಡೆದವರಲ್ಲಿ ಮಹಿಳೆಯರು ತುಂಬ ಕಡಿಮೆ. ಇಂದಿರಾ ಗಾಂಧಿ, ಮದರ್ ತೆರೇಸಾ, ಅರುಣಾ ಅಸಫ್ ಆಲಿ, ಎಂ. ಎಸ್. ಸುಬ್ಬುಲಕ್ಷ್ಮಿ, ಲತಾ ಮಂಗೇಶ್ಕರ್ ಎಂದು ಕೆಲವರೇ ಇದ್ದಾರೆ.

ಮದರ್ ತೆರೇಸಾ ಒಬ್ಬರು ಕ್ರಿಶ್ಚಿಯನ್. ನೆಲ್ಸನ್ ಮಂಡೇಲಾ ಅರೆ ಕ್ರಿಶ್ಚಿಯನ್ ಮತ್ತು ಆಫ್ರಿಕಾದವರು. ಖಾನ್ ಅಬ್ದುಲ್ ಗಫಾರ್ ಖಾನ್, ಜಾಕಿರ್ ಹುಸೇನ್, ಅಬ್ದುಲ್ ಕಲಾಮ್ ಆಜಾದ್, ಬಿಸ್ಮಿಲ್ಲಾ ಖಾನ್, ಎಪಿಜೆ ಅಬುಲ್ ಕಲಂ ಎಂದು ಕೆಲವರೇ ಮುಸ್ಲಿಂ ಭಾರತ ರತ್ನರಿದ್ದಾರೆ. ಖಾನ್ ಅಬ್ದುಲ್ ಗಫಾರ್ ಖಾನ್ ಪಾಕಿಸ್ತಾನದ ಪಠಾಣ್. ಅವರು ಸ್ವಾತಂತ್ರ್ಯ ಹೋರಾಟಗಾರ ಗಡಿನಾಡ ಗಾಂಧಿ ಎಂದು ಖ್ಯಾತರು. 1988ರಲ್ಲಿ ಚುನಾವಣೆಗೆ ಹತ್ತಿರದಲ್ಲಿ ರಾಜೀವ್ ಗಾಂಧಿಯವರು ಎಂಜಿಆರ್ ಅವರಿಗೆ ಮರಣೋತ್ತರ ಭಾರತ ರತ್ನ ಘೋಷಿಸಿದ್ದು ವಿವಾದ ಆಗಿತ್ತು. ಮೋದಿಯವರು ಘೋಷಣೆ ಮಾಡಿದ್ದು ವಿವಾದ ಆಗುವುದಿಲ್ಲ. ಇಂದಿನ ಮಾಧ್ಯಮ ಸ್ವಾತಂತ್ರ್ಯ ಅದು.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.