ಜನಸಾಮಾನ್ಯರಿಗೆ ತ್ವರಿತ ನ್ಯಾಯ ಅಗತ್ಯ: ಕಾನೂನು ಸಚಿವ ಹೆಚ್.ಕೆ. ಪಾಟೀಲ್
ಜಿಲ್ಲಾ ನ್ಯಾಯಾಂಗ ಉಡುಪಿ, ವಕೀಲರ ಸಂಘ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ನೂತನವಾಗಿ ನಿರ್ಮಾಣವಾದ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವನ್ನು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಉದ್ಘಾಟಿಸಿದರು.
ನೂತನ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ರಾಜ್ಯದಲ್ಲಿ ಸಾರ್ವಜನಿಕರಿಗೆ ಶೀಘ್ರ ನ್ಯಾಯದಾನ ವ್ಯವಸ್ಥೆ ತಲುಪಿಸುವ ಉದ್ದೇಶದಿಂದ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ ಮಾಡಲು ವಿಧಾನಸಭೆಯ ೨ ಸದನಗಳಲ್ಲಿ ನಿರ್ಣಯ ಮಾಡಿದ್ದು ಇದನ್ನು ರಾಷ್ಟ್ರಪತಿಗಳ ಅಂಕಿತಗಾಗಿ ಸಲ್ಲಿಸಲಾಗಿದೆ. ಬ್ರಹ್ಮಾವರಕ್ಕೆ ಖಾಯಂ ನ್ಯಾಯಾಲಯ ರಚನೆಗೆ ಅತೀ ಶೀಘ್ರದಲ್ಲಿ ಮಂಜೂರು ಮಾಡಲಾಗುವುದು ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್, ಎಂ. ಐ. ಅರುಣ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಇಲಾಖೆ, ಕೇಂದ್ರ ವಲಯ, ಶಿವಮೊಗ್ಗ ಪ್ರಭಾರ ಮುಖ್ಯ ಅಭಿಯಂತರ ಕೆ. ಜಿ. ಜಗದೀಶ್, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತ ವೀರ ಶಿವಪ್ಪ ,ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ಕಾರ್ಯದರ್ಶಿ ಶ್ರೀಪಾದ ರಾವ್ ಇನ್ನಿತರು ಉಪಸ್ಥಿತರಿದ್ದರು.