ಭ್ರಷ್ಟ ಭಾರತ ಸ್ಪಷ್ಟ
2023ರ ಲೆಕ್ಕಾಚಾರದ ಮೇಲೆ 2024ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಹೊರಬಿದ್ದಿದೆ. ಭಾರತವು 40 ಅಂಕದೊಡನೆ 93ನೇ ಸ್ಥಾನದಲ್ಲಿ ಇದೆ. ಕಳೆದ ವರುಷ 39 ಅಂಕದೊಡನೆ 85ನೇ ಸ್ಥಾನದಲ್ಲಿ ಇದ್ದ ಭಾರತ ಮತ್ತಷ್ಟು ಭ್ರಷ್ಟ ಕೂಪಕ್ಕೆ ಜಾರಿದೆ. ಪಾರದರ್ಶಕ ಅಂತರರಾಷ್ಟ್ರೀಯ ಸಂಸ್ಥೆ ಅರ್ಥಾತ್ ಟ್ರಾನ್ಸ್‍ಫರೆನ್ಸಿ ಇಂಟರ್‍ನ್ಯಾಶನಲ್ ಸಂಸ್ಥೆ ಈ ಸೂಚ್ಯಂಕ ಪಟ್ಟಿ ಹೊರಗಿಟ್ಟಿದೆ. ಭಾರತದಲ್ಲಿ ಭ್ರಷ್ಟಾಚಾರ ವಿರೋಧಿ ಭ್ರಮಾ ವಲಯ ತುಂಬ ವಿಸ್ತಾರವಾಗಿದೆ ಎಂದೂ ವರದಿ ಹೇಳಿದೆ. 100 ಅಂಕ ಯಾರೂ ಪಡೆದಿಲ್ಲ. 90 ಅಂಕ ಪಡೆದ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ ಭ್ರಷ್ಟಾಚಾರ ಮುಕ್ತ ದೇಶ ಜಗತ್ತಿನಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಜಾಗತಿಕವಾಗಿ ಒಟ್ಟು ಮೊತ್ತ ಭ್ರಷ್ಟಾಚಾರದಲ್ಲಿ ಭಾರತವೇ ಚಾಂಪಿಯನ್ ಎಂಬುದು ಒಂದು ಲೆಕ್ಕಾಚಾರ. ಭಾರತದ ಒಂದು ದಿನದ ಭ್ರಷ್ಟಾಚಾರದ ಹಣ ಹರಿವು ದೇಶದ ಬಜೆಟ್‍ಗಿಂತ ದೊಡ್ಡದು ಎನ್ನುತ್ತದೆ ಬೇರೊಂದು ಮಾಹಿತಿ. ದೇಶದ ಅಪಾರ ಸಂಪನ್ಮೂಲ ಮತ್ತು ಜನಸಂಖ್ಯೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಜಗತ್ತಿನಲ್ಲೇ ಅತಿ ಭ್ರಷ್ಟ ಪೆÇೀಲೀಸು ಇಲಾಖೆ ಭಾರತದ್ದು ಎಂದು ಮೂರು ವರುಷಗಳ ಹಿಂದೆ ಒಂದು ಸಮೀಕ್ಷೆ ಸ್ಪಷ್ಟ ಪಡಿಸಿತ್ತು. ಮೋದಿಯವರು ಪ್ರಧಾನಿ ಆದಾಗ ಲಂಚ ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದರು. ತಿನ್ನುವುದಿಲ್ಲ ಇವರೆಲ್ಲ ಆನಂದದಿಂದ ಅನುಭವಿಸುತ್ತಿದ್ದಾರೆ ಎಂಬ ಮಾತು ಗಾಳಿಯಲ್ಲಿ ತೇಲಾಡುತ್ತಿದೆ. ಇದೀಗ ಚಂಡಿಗಡದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ 16 ಮತ ಪಡೆದು ಗೆದ್ದರೆ, ಎಎಪಿ ಅಭ್ಯರ್ಥಿ 12 ಮತ ಪಡೆದು ಸೋತಿದ್ದಾರೆ. ಅದರಲ್ಲಿ ವಿಶೇಷ ಏನು ಅಂತೀರಾ, 8 ಮತಗಳನ್ನು ಅಸಿಂಧು ಮಾಡಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸೋಲುವಂತೆ ಮಾಡಲಾಗಿದೆ. ಇದಕ್ಕೆ ಬಿಜೆಪಿಯು ಕೋಟಿ ಕೋಟಿ ಭ್ರಷ್ಟ ಹಣ ಸುರಿದಿದೆ. ಇಂತಾ ಹಗಲು ದರೋಡೆ ಮಾಡುವವರು ಲೋಕ ಸಭೆಯ ಚುನಾವಣೆ ಗೆಲ್ಲಲು ಯಾವ ಕೀಳು ಮಟ್ಟಕ್ಕೆ ಕೂಡ ಇಳಿಯಬಹುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಆರೋಪ ಮಾಡಿದ್ದಾರೆ.
ಜಗತ್ತಿನ ಅತಿ ದೊಡ್ಡ ಸಮಸ್ಯೆ ರಾಜಕೀಯ ಭ್ರಷ್ಟಾಚಾರ. ಅವರು ತಮ್ಮ ಅಧಿಕಾರವನ್ನು ತಮ್ಮ ತಿತ್ತಿ ತುಂಬಿಕೊಳ್ಳಲು, ತಮ್ಮವರಿಗೆ ಆಸ್ತಿ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಜಾಗತಿಕ ಭ್ರಷ್ಟಾಚಾರದ ಪಿಡುಗು ಸರಕಾರಿ ಉದ್ಯೋಗಗಳಲ್ಲಿ ವ್ಯಾಪಕವಾಗಿ ಇದೆ. ಈಗಿನ ಸ್ಥಿತಿ ಹೇಗಿದೆ ಎಂದರೆ ಟಿಕೆಟ್ ಪಡೆಯಲು ಕೋಟಿ ಕೋಟಿ ಮತ್ತು ಕೆಲಸ ಗಿಟ್ಟಿಸಲು ಲಕ್ಷ ಲಕ್ಷ ವ್ಯಯಿಸಬೇಕಾದ ಸ್ಥಿತಿ ಇದೆ. ಅದನ್ನು ಅವರು ಅಧಿಕಾರ ಪಡೆಯುತ್ತಲೇ ಬಡ್ಡಿ ಸಮೇತ ವಸೂಲು ಮಾಡಲು ಮುನ್ನುಗ್ಗುತ್ತಾರೆ. ಇನ್ನೂ ಒಂದು ಬಿಗಡಾಯಿಸಿರುವ ಸಮಸ್ಯೆ ಎಂದರೆ ಈಗ ನ್ಯಾಯ ಮಾರ್ಗದಲ್ಲಿ ಚುನಾವಣೆ ಗೆಲ್ಲುವವರು ಇಲ್ಲವೇ ಇಲ್ಲ. ಅಡ್ಡ ಹಾದಿಯಲ್ಲಿ ಕೋಟಿ ಕೋಟಿ ರೂಪಾಯಿ ವ್ಯಯಿಸಿ ಚುನಾವಣೆ ಗೆಲ್ಲಬೇಕಾಗಿದೆ. ರಾಜಕಾರಣಿಗಳು ಮುಂದಿನ ಚುನಾವಣೆಯ ವೆಚ್ಚಕ್ಕೆ ಎಂದು ಕೂಡ ಭ್ರಷ್ಟಾಚಾರ ಮಾಡುತ್ತಾರೆ. ಯಾವುದೇ ಕ್ಷೇತ್ರ ಇಂದು ಭ್ರಷ್ಟಾಚಾರ ಮುಕ್ತ ಎಂದು ಹೇಳಲಾಗದು.
ದೇವರ ಹುಂಡಿಗಿಂತ ಅರ್ಚಕರ ತಟ್ಟೆಗೆ ನೋಟು ಹಾಕಿದರೆ ನಿಮಗೆ ಬೇಗ ಉತ್ತಮ ಪ್ರಸಾದ ಸಿಗುತ್ತದೆ. ತನಗಾಗಿ, ತನ್ನವರಿಗಾಗಿ ಕಾನೂನು ಬಾಹಿರ ರೀತಿಯಲ್ಲಿ ಹಣ ಸಂಪಾದನೆ ಮಾಡುವುದೇ ಭ್ರಷ್ಟಾಚಾರ. ಅಧಿಕಾರಿಯ ಮನೆಗೆ ತರಕಾರಿ ಬುಟ್ಟಿ, ಹಣ್ಣಿನ ತಟ್ಟೆ ಕಳುಹಿಸುವುದರಿಂದ ಹಿಡಿದು ದೊಡ್ಡ ನೋಟಿನ ಕಟ್ಟು ಕಳುಹಿಸುವವರೆಗೆ ಈ ಭ್ರಷ್ಟಾಚಾರ ಇರುತ್ತದೆ. ಪ್ರವಾಸಿ ಏಜೆನ್ಸಿಗಳು ಭ್ರಷ್ಟಾಚಾರದ ಒಂದು ಮಗ್ಗುಲನ್ನು ಆವರಿಸಿರುವುದು ಕಂಡು ಬರುತ್ತಿದೆ. ಮುಖ್ಯವಾಗಿ ಔಷಧಿ ತಯಾರಿಕೆ ಕಂಪೆನಿಯವರು ತಮ್ಮ ಕಂಪೆನಿಯ ಔಷಧಿಯನ್ನು ಸೂಚಿಸುವ ವೈದ್ಯರಿಗೆ ದೂರ ಪ್ರಯಾಣ, ವಿದೇಶ ಪ್ರಯಾಣ ಎಂದೆಲ್ಲ ಕೊಡುಗೆ ಕೊಡುವುದು ವರದಿಯಾಗಿತ್ತು. ಪತ್ರಿಕಾ ಸ್ವಾತಂತ್ರ್ಯ ಹೇಗೆ ಉಳಿದಿಲ್ಲವೋ ಪತ್ರಿಕಾ ರಂಗ ಕೂಡ ಪವಿತ್ರವಾಗಿ ಉಳಿದಿಲ್ಲ. ಇದು ಹೊಸ ರೋಗವೇನೂ ಅಲ್ಲ, ಹಳೆಯ ರೋಗ ಮತ್ತಷ್ಟು ಉಲ್ಬಣಿಸಿದೆ ಅಷ್ಟೆ. ಪತ್ರಿಕಾ ರಂಗಕ್ಕೆ ಸಂಬಂಧಿಸಿದಂತೆ ಪುಲಿಟ್‍ಶರ್ ಪ್ರಶಸ್ತಿ ಲೋಕ ಪ್ರಸಿದ್ಧ. ಇದಕ್ಕೆ ಮೀಸಲು ನಿಧಿಯನ್ನು ಪುಲಿಟ್‍ಶರ್ ಯೆಲ್ಲೋ ಜರ್ನಲಿಸಂನಿಂದ ಗಳಿಸಿದರು ಎನ್ನುತ್ತದೆ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ.
ಹಣದ ಮೋಹ, ಅಧಿಕಾರದ ದೌಲತ್ತು, ಬಡತನ,ನಿರುದ್ಯೋಗ ಮತ್ತು ಹಣಕಾಸು ಸ್ವಾತಂತ್ರ್ಯ ಇಲ್ಲದಿರುವುದು, ಅಡ್ಡ ಹಾದಿಯ ಸುಖಕ್ಕೆ ಬಿದ್ದಿರುವುದು, ಲಿಂಗ ಅಸಮಾನತೆ ಇತ್ಯಾದಿ ಭ್ರಷ್ಟಾಚಾರಕ್ಕೆ ಹಾದಿ ಮಾಡುತ್ತವೆ. ಲಂಚ ಎನ್ನುವುದು ಶೀಲವೂ ಆಗಬಹುದು. 50 ವರುಷ ಹಿಂದೆಯೇ ವಿಶ್ವವಿದ್ಯಾನಿಲಯ ಒಂದರಲ್ಲಿ ಶೀಲದ ಲಂಚ ಕೇಳಿದ್ದು, ಹೆಸರಿತ್ಯಾದಿ ಇಲ್ಲದೆ ಬಂದ ವರದಿ ಸಂಚಲನ ಮೂಡಿಸಿತ್ತು. ಒಂದು ಸಂಘಟನೆಯು ಇಂದು ದೇಶದೆಲ್ಲೆಡೆ ಹರಡಿರುವುದು ಎಲ್ಲ ಪಕ್ಷಗಳವರೊಂದಿಗೂ ಈ ಬಗೆಯ ಸತ್ಸಂಗ ನಡೆಸಿರುವುದರಿಂದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ಉಳಿಸಿ ಕೂಗು ಸಾಮಾನ್ಯ. ಒಬ್ಬ ಮಾಜೀ ನ್ಯಾಯಾಧೀಶರು ಕೂಡ ಈ ಹೋರಾಟದಲ್ಲಿ ಇದ್ದರು. ಆದರೆ ಉಚ್ಚ ನ್ಯಾಯಾಲಯವು ಕಾರ್ ಪಾರ್ಕಿಂಗಿಗೆ ಕಬ್ಬನ್ ಪಾರ್ಕ್ ಸ್ವಲ್ಪ ಸೆಳೆದಾಗ ಈ ನಿವೃತ್ತ ನ್ಯಾಯಾಧೀಶರು ಮಾತನಾಡಲಿಲ್ಲ. ಪತ್ರಿಕೆಗಳೂ ಆಗಾಗ ಕಬ್ಬನ್ ಪಾರ್ಕ್ ಉಳಿಸಿ ಎನ್ನುತ್ತವೆ. ಬೆಂಗಳೂರು ಪತ್ರಕರ್ತರ ಸಂಘ ಅತಿಕ್ರಮಣ ಮಾಡಿಕೊಂಡಿರುವ ಜಾಗ ಕಬ್ಬನ್ ಪಾರ್ಕ್ ಜಾಗವಾಗಿದೆ. ಇಂತಾ ಉದಾಹರಣೆಗಳು ಅಡಿಗಡಿಗೆ ಸಿಗುತ್ತವೆ.
ಪಾರದರ್ಶಕ ಅಂತರಾಷ್ಟ್ರೀಯ ಸಂಸ್ಥೆಯ ಹೊಸ ಪಟ್ಟಿಯಂತೆ ಡೆನ್ಮಾರ್ಕ್ 90, ನ್ಯೂಜಿಲ್ಯಾಂಡ್, ಫಿನ್ಲೆಂಡ್ ತಲಾ 87, ನಾರ್ವೆ 84, ಸಿಂಗಾಪುರ ಮತ್ತು ಸ್ವೀಡನ್‍ಗಳು ತಲಾ 83, ಸ್ವಿಜರ್ಲ್ಯಾಂಡ್ 82, ನೆದರ್ಲ್ಯಾಂಡ್ಸ್ 80, ಜರ್ಮನಿ 79, ಲಕ್ಸೆಂಬರ್ಗ್ ಹಾಗೂ ಅಯರ್‍ಲ್ಯಾಂಡ್ ತಲಾ 77 ಅಂಕಗಳನ್ನು ಪಡೆದು ಮೊದಲ 11 ಸ್ಥಾನಗಳಲ್ಲಿ ಇವೆ. ಬ್ರಿಟನ್, ಜಪಾನ್, ಬೆಲ್ಜಿಯಂಗಳು ತಲಾ 73 ಅಂಕ ಪಡೆದಿದ್ದರೆ, ಅಮೆರಿಕ ಸಂಯುಕ್ತ ಸಂಸ್ಥಾನ 69 ಅಂಕ ಮಾತ್ರ ಪಡೆದಿದೆ. ಭಾರತದ ನೆರೆಹೊರೆಯಲ್ಲಿ ಭೂತಾನ್ 68 ಅಂಕ ಪಡೆದು ಭಾರತಕ್ಕಿಂತ ತುಂಬ ಮೇಲಿದೆ. ಉಳಿದವು ಕೆಳಗಿವೆ. ಸೊಮಾಲಿಯಾ, ಅಫಘಾನಿಸ್ತಾನ, ಮ್ಯಾನ್ಮಾರ್ ಅತಿ ಭ್ರಷ್ಟ ಎನಿಸಿದ್ದು 180 ದೇಶಗಳ ಪಟ್ಟಿಯಲ್ಲಿ ಕೊನೆಯ 3 ಎನಿಸಿವೆ.
1977ರ ಕರಪ್ಟ್ ಪ್ರಾಕ್ಟಿಶನ್ ಕಾಯ್ದೆಯು ಪ್ರಪಂಚದ ಭ್ರಷ್ಟಾಚಾರದ ನಿಗ್ರಹಕ್ಕೆ ಇದೆ. ಎಲ್ಲ ದೇಶಗಳಲ್ಲೂ ಇಂತಾ ಕಾಯ್ದೆಗಳು ಇವೆ. ಆದರೆ ಭ್ರಷ್ಟಾಚಾರ ನಿಗ್ರಹ ಬಿಡಿ, ಭ್ರಷ್ಟಾಚಾರ ನಿಯಂತ್ರಣ ಕೂಡ ಇವುಗಳಿಂದ ಸಾಧ್ಯವಾಗಿಲ್ಲ. ಇಂತಾ ನಿಗ್ರಹ ಪಡೆಗಳವರೇ ಭ್ರಷ್ಟಾಚಾರದಲ್ಲಿ ಪಾಲು ಪಡೆಯುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ದೇಶ ಮಟ್ಟದಲ್ಲಿ ಲೋಕಸತ್ತಾ ಇದೆ. ಬಿಜೆಪಿ ಒಕ್ಕೂಟ ಸರಕಾರದಲ್ಲಿ ಅಧಿಕಾರ ಹಿಡಿದ ಮೇಲೆ ಅದರ ಸುದ್ದಿಯೇ ಇಲ್ಲ. ಅದರ ಬದಲು ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ಪ್ರತಿ ಪಕ್ಷಗಳ ಮೇಲೆ ಛೂ ಬಿಡುವುದು ಅಧಿಕವಾಗಿದೆ ಎಂದು ಪ್ರತಿಪಕ್ಷಗಳ ಮಂದಿ ಆಪಾದಿಸುತ್ತಾರೆ. ರಾಜ್ಯಗಳಲ್ಲಿ ಲೋಕಾಯುಕ್ತಗಳು ಇವೆ. ಇವು ದಾಳಿ ಮಾಡಿ ನೋಟಿನ ಕಟ್ಟು, ಚಿನ್ನದ ಗಂಟು ಹಿಡಿಯುತ್ತವೆ. ಆಮೇಲೆ ಪ್ರಕರಣ ಏನಾಯಿತು ಎಂದು ಗೊತ್ತಾಗುವುದಿಲ್ಲ.
ಮಹಾರಾಷ್ಟ್ರ, ಗುಜರಾತ್ ಹೆಚ್ಚು ಭ್ರಷ್ಟ ಎನ್ನುತ್ತದೆ ಒಂದು ಸಮೀಕ್ಷೆ. ಅದಕ್ಕೆ ಕಾರಣ ಅಲ್ಲಿನ ಅಸಂಖ್ಯಾತ ಉದ್ಯಮಗಳು. ಪರವಾನಗಿ ಪಡೆಯುವುದು, ಸರಕಾರದ ಜಾಗ ಮಂಜೂರು ಮಾಡಿಸಿಕೊಳ್ಳುವುದು ಎಂದು ಲಂಚದ ಹೊಳೆಯೇ ಹರಿಯುತ್ತದೆ. ಒಡಿಶಾ, ಕರ್ನಾಟಕ ಇತ್ಯಾದಿ ಕೂಡ ಪಟ್ಟಿಯಲ್ಲಿ ಮೇಲೆ ಇವೆ. ಭ್ರಷ್ಟಾಚಾರದ ಪ್ರಕರಣ ದಾಖಲಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆ. ದೇಶದಲ್ಲಿ ಪ್ರತಿ ವರುಷ ಸರಾಸರಿ 10,000ಕ್ಕಿಂತ ಹೆಚ್ಚು ಭ್ರಷ್ಟರ ಮೇಲೆ ಮೊಕದ್ದಮೆ ಬೀಳುತ್ತದೆ. ಆದರೆ ಕಾಲು ಭಾಗ ಕೂಡ ಅಂತ್ಯ ಕಾಣುವುದಿಲ್ಲ. ಇದಕ್ಕಾಗಿ ಭ್ರಷ್ಟರ ವಿರುದ್ಧ ದೂರು ನೀಡಲು ಜಾಗತಿಕವಾಗಿ ಜನರು ಮುಂದೆ ಬರುವುದಿಲ್ಲ ಎಂದು ಮತ್ತೊಂದು ಸಮೀಕ್ಷೆ ಹೇಳುತ್ತಿದೆ. ಸರಕಾರಿ ಕಚೇರಿಗಳಲ್ಲಿ ಲಂಚಕ್ಕೆ ಮಾಮೂಲಿ ಎಂಬ ಹೆಸರಿದೆ. ಈ ಹೆಸರಿನಿಂದಲೇ ಇದು ಎಷ್ಟು ವ್ಯಾಪಕ ಮತ್ತು ಪುರಾತನವಾದುದು ಎಂಬುದು ತಿಳಿದು ಬರುತ್ತದೆ.
✍ ಬರಹ: ಪೇರೂರು ಜಾರು