ಮಗಳನ್ನು ನೋವು ನೀಡಿ ಕೊಂದರು : ಕೆಪಿಟಿ ವಿದ್ಯಾರ್ಥಿನಿ ನಿಕಿತಾ ಪೋಷಕರ ನೋವಿನ ಮಾತು

ವಾಂತಿ ಬಂದ ಹಿನ್ನೆಲೆಯಲ್ಲಿ ಉಡುಪಿ ಸಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದ ನಮ್ಮ ಹತ್ತೊಂಬತ್ತರ ಹರೆಯದ ಮಗಳನ್ನು ಐದು ದಿನಗಳ ಕಾಲ ನೋವು ನೀಡಿ ವೈದ್ಯರು ಕೊಂದು ತಿಂದರು ಎಂಬುದಾಗಿ ಮೃತಳ ಚಿಕ್ಕಮ್ಮ ಶೈಲಜ ನೋವಿನಿಂದ ನುಡಿದಿದ್ದಾರೆ.
ಕಾಪು ತಾಲೂಕಿನ ಕೆಮ್ಮುಂಡೇಲು ಬಂಡಸಾಲೆ ನಿವಾಸಿ ಜನಾರ್ದನ ಎಂಬವರ ಪುತ್ರಿ, ಮಂಗಳೂರು ಕೆಪಿಟಿ ಸಂಸ್ಥೆಯ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಕಿತಾ(19) ಅನುಮಾಸ್ಪದ ಸಾವಿನ ಬಗ್ಗೆ ಮೃತಳ ಪೋಷಕರು ಉಡುಪಿ ಸಿಟಿ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೃತಳ ಚಿಕ್ಕಮ್ಮ ಶೈಲಜಾ ಮಾತನಾಡಿ, ನಮ್ಮ ಮನೆ ಮಗಳು ನಿಕಿತಾಗೆ ನಿರಂತರ ವಾಂತಿ ಬಂದ ಹಿನ್ನಲೆಯಲ್ಲಿ 14ನೇ ತಾರೀಕು ಮುಂಜಾನೆ 4-30ರ ಸುಮಾರಿಗೆ ಉಡುಪಿಯ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವಳ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಂಡ ಅಲ್ಲಿನ ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸಿ ದಿನಕ್ಕೊಂದು ರೋಗ ಲಕ್ಷಣದ ಬಗ್ಗೆ ಮನೆಮಂದಿಯಲ್ಲಿ ತಿಳಿಸಿದಾಗ ನಾವು ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸುವುದಾಗಿ ಹೆಳಿದರೂ ಒಪ್ಪದ ವೈದ್ಯರು ಮತ್ತೆ ಮತ್ತೆ ನಮ್ಮ ಮಗುವಿನ ದೇಹದಲ್ಲಿ ಆಟವಾಡಿ ಅಂತಿಮವಾಗಿ ಐದನೇ ದಿನ ನಮ್ಮ ಮನೆಯ ದೀಪವನ್ನು ಶಾಶ್ವತವಾಗಿ ಆರಿಸಿಯೇ ಬಿಟ್ಟರು ಎಂಬುದಾಗಿ ಕಣ್ಣೇರಿಟ್ಟರು.
ನಮ್ಮ ಮಗು ಸಿಟಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ನಮ್ಮ ಕೈ ತಪ್ಪಿ ಹೋಯಿತು. ಮುಂದೆ ಯಾವುದೇ ತಾಯಂದಿರಿಗೆ ಇಂತಹ ನೋವು ಬಾರದಿರಲಿ. ಈ ಆಸ್ಪತ್ರೆಗೆ ಹೋಗುವ ಮೊದಲು ಯೋಚಿಸಿ ಎನ್ನುತ್ತಾರೆ ಆಕೆಯ ಚಿಕ್ಕಮ್ಮ ಶೈಲಜಾ.
ಮಗಳ ಸಾವನ್ನು ಹತ್ತಿರದಲ್ಲೇ ಕಂಡ ತಂದೆ ಜನಾರ್ದನ್ ಮಾತನಾಡಿ ನನ್ನ ಮಗಳಿಗೆ ಆರಂಭದ ದಿನದಿಂದಲೂ ಬಾರೀ ನೋವು ನೀಡಿದ್ದಾರೆ, ಗ್ಲುಕೋಸ್ ನೀಡುವುದರಿಂದ ಹಿಡಿದು ಗಂಟಲಿಗೆ ಹಾಕಿದ ಪೈಪ್ ಹಾಕಿದಾಗಲೂ ಬಹಳಷ್ಟು ನೋವು ಕೊಟ್ಟ ಬಗ್ಗೆ ಮಗಳು ನಮ್ಮಲ್ಲಿ ಹೇಳಿಕೊಂಡಿದ್ದಾಳೆ. ಕೊನೆಯ ದಿನದವರೆಗೂ ಆಕೆಯನ್ನು ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲು ವೈದ್ಯರಲ್ಲಿ ವಿನಂತಿಸಿದರೂ ಒಪ್ಪದ ಅವರು ಕೊನೆಗೂ ನಮ್ಮ ಮಗಳನ್ನು ಹಸಿ ಹಸಿಯಾಗಿ ತಿಂದೇ ಬಿಟ್ಟರು ಎಂದು ಕಣ್ಣೀರು ಹಾಕಿದ್ದಾರೆ.
ಆಕೆಯ ಒತ್ತಾಯಕ್ಕಾಗಿ ಆಕೆಗಾಗಿ ಬ್ಯಾಂಕ್ ಸಾಲ ಮಾಡಿ ಕಟ್ಟಿದ ಮನೆಯಲ್ಲಿ ಆಕೆಯೇ ಇಲ್ಲದ ಮೇಲೆ ನಾವು ಹೇಗೆ ಬದುಕಲಿ. ಆಕೆಯನ್ನು ಕೊಂದು ಕಳೆದ ವೈದ್ಯರು ನಮ್ಮನ್ನೂ ಅವಳಿದ್ದಲ್ಲಿಗೆ ಕಳುಹಿಸಲಿ ಎಂದು ನಿಖಿತಳ ತಾಯಿ ಅಳಲನ್ನು ತೋಡಿಕೊಂಡಿದ್ದಾರೆ.
