ಕುಕ್ಕೆ ಸುಬ್ರಹ್ಮಣ್ಯ: ದೇವರ ನೌಕಾವಿಹಾರ, ಅವಭೃತೋತ್ಸವ

ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಮಂಗಳವಾರ ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಸಂಪನ್ನವಾಯಿತು.

 ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಅವಭೃತೋತ್ಸವದ ಧಾರ್ಮಿಕ ವಿದಿವಿಧಾನ ನೆರವೇರಿಸಿದರು. ಶ್ರೀ ದೇವಳದ ಅರ್ಚಕರಾದ ವೇದಮೂರ್ತಿ ರಾಜೇಶ್ ನಡ್ಯಂತಿಲ್ಲಾಯರು ಮತ್ತು ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಉತ್ಸವದ ವೈದಿಕ ವಿದಿ ವಿಧಾನಗಳಲ್ಲಿ ಸಹಕರಿಸಿದರು. ಸಹಸ್ರಾರು ಭಕ್ತರು ಶ್ರೀ ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ ಕೃತಾರ್ಥರಾದರು.

ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ಬಳಿಕ ದೇವರಿಗೆ ಓಕುಳಿ ಸಮರ್ಪಣೆಯಾಗಿ ಭಕ್ತಾಧಿಗಳಿಗೆ ಓಕುಳಿ ಪ್ರೋಕ್ಷಣೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ನಂತರ ಶ್ರೀ ದೇವರ ಅವಭೃತೋತ್ಸವ ಸವಾರಿ ಶ್ರೀದೇವಳದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ನಂತರ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಶ್ರೀ ದೇವರ ನೌಕಾವಿಹಾರ ನಡೆಯಿತು. ಮಾವು, ಬಾಳೆ, ತಳಿರು-ತೋರಣ ಮತ್ತು ಹೂವುಗಳನ್ನೊಳಗೊಂಡು ತಳಿರು ತೋರಣ ಮತ್ತು ಹೂವುಗಳಿಂದ ಹಾಗೂ ಬಿರುದಾವಳಿಗಳಿಂದ ಸಿಂಗರಿಸಲ್ಪಟ್ಟ ಅವಳಿ ದೋಣಿಗಳನ್ನು ಒಂದಾಗಿಸಿ ಅಚ್ಚುಕಟ್ಟಾಗಿ ನಿರ್ಮಿತವಾದ ತೆಪ್ಪದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ನೌಕಾವಿಹಾರ ನೆರವೇರಿತು. ತದನಂತರ ಕುಮಾರಧಾರೆಯ ಮತ್ಸ್ಯತೀರ್ಥದ ಶ್ರೀ ದೇವರ ಜಳಕದಗುಂಡಿಯಲ್ಲಿ ದೇವರ ಅವಭೃತೋತ್ಸವ ನಡೆಯಿತು. ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯ ನೇತೃತ್ವದಲ್ಲಿ ಪುರೋಹಿತರು ಮಂತ್ರಘೋಷ ನೆರವೇರಿಸಿದರು. ಮಂತ್ರ ಘೋಷದ ನಡುವೆ ಪ್ರಧಾನ ಅರ್ಚಕರು ಕುಮಾರಧಾರ ಪುಣ್ಯ ತೀರ್ಥವನ್ನು ಶಂಖದಲ್ಲಿ ದೇವರಿಗೆ ಸಮರ್ಪಿಸಿದರು. ಬಳಿಕ ಸೀಯಾಭಿಷೇಕ ಸೇರಿದಂತೆ ವಿವಿಧ ವೈಧಿಕ ವಿದಿವಿಧಾನಗಳನ್ನು ನಡೆಸಿದರು. ತದನಂತರ ಕುಮಾರಧಾರ ಪುಣ್ಯತೀರ್ಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಜಳಕ ನೆರವೇರಿತು. ಜಳಕದ ಬಳಿಕ ಕುಮಾರಧಾರ ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಶೋಭಾ ಗಿರಿಧರ್, ಮನೋಹರ ರೈ, ಲೋಕೇಶ್ ಮುಂಡುಕಜೆ, ಬ್ರಹ್ಮರಥ ದಾನಿಗಳಲ್ಲಿ ಓರ್ವರಾದ ಉದ್ಯಮಿ ಅಜಿತ್ ಶೆಟ್ಟಿ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಪವನ್ ಎಂ.ಡಿ.ಸೇರಿದಂತೆ ದೇವಳದ ಸಿಬ್ಬಂಧಿಗಳು, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ಯಶಸ್ವಿಯ ನೀರಾಟ:

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆನೆ ಯಶಸ್ವಿಯು ಎಲ್ಲರಂತೆ ತಾನೂ ಕೂಡಾ ಸ್ನಾನ ಮಾಡಿ ನೀರಾಟವಾಡಿತು. ಶ್ರೀ ದೇವರ ಅವಭೃತದ ಸಮಯದಲ್ಲಿ ಶ್ರೀ ದೇವರೊಂದಿಗೆ ಸಹಸ್ರಾರು ಭಕ್ತರು ಪುಣ್ಯ ಸ್ನಾನ ನೆರವೇರಿಸಿದರು.

ಡಿ.24ರಂದು ನೀರಿನಲ್ಲಿ ಬಂಡಿ ಉತ್ಸವ:

ಡಿ.24ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದೆ. ರಾತ್ರಿ ದೇವಳದ ಹೊರಾಂಗಣದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಅಲ್ಲದೆ ಗೋಪುರ ನಡಾವಳಿ ನೆರವೇರಲಿದೆ.

Related Posts

Leave a Reply

Your email address will not be published.