ಉಳೆಪಾಡಿ ಮಿತ್ತಬೆಟ್ಟುವಿನಲ್ಲಿ ಉರುಳಿಗೆ ಸಿಕ್ಕಿ ಚಿರತೆ ಸಾವು

ಚಿರತೆಯೊಂದು ಉರುಳಿಗೆ ಸಿಕ್ಕಿ ಒದ್ದಾಡಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿಯ ಗುಡ್ಡೆಯಲ್ಲಿ ನಡೆದಿದೆ.

ಕಾಡು ಪ್ರಾಣಿಗಳ ಹಾವಳಿ ತಡೆಯಲಾರದೆ ಸ್ಥಳೀಯರು ಮಿತ್ತಬೆಟ್ಟು ಬಳಿಯ ಗುಡ್ಡದಲ್ಲಿ ಇಟ್ಟಿದ್ದ ಉರುಳಿಗೆ ಚಿರತೆ ರಾತ್ರಿ ಹೊತ್ತು ಬಿದ್ದಿದೆ ಎನ್ನಲಾಗಿದೆ. ಬೆಳಗ್ಗೆ ಗುಡ್ಡದಲ್ಲಿ ನಾಯಿ ಬೊಗಳುವ ಶಬ್ದ ಕೇಳಿ ಭಯಭೀತರಾಗಿ ಸ್ಥಳೀಯರು ಸ್ಧಳಕ್ಕೆ ಧಾವಿಸಿದಾಗ ಚಿರತೆ ಉರುಳಿಗೆ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ.

ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಶೆಟ್ಟಿ ಹಾಗೂ ಸ್ಧಳೀಯರು ಸೇರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಆದರೆ ಅರಣ್ಯ ಅಧಿಕಾರಿಗಳು ಬರುವ ಮುನ್ನವೇ ಚಿರತೆ ಉರುಳಿಗೆ ಸಿಕ್ಕಿ ಒದ್ದಾಡಿ ಪ್ರಾಣ ಬಿಟ್ಟಿದೆ.

ಐಕಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉಳೆಪಾಡಿ ಪರಿಸರದಲ್ಲಿ ಕಳೆದ ಕೆಲವು ತಿಂಗಳಿನಿಂದ ಚಿರತೆಯ ಕಾಟ ವಿಪರೀತವಾಗಿದ್ದು ಸ್ಧಳೀಯರು ಭಯಭೀತರಾಗಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅನೇಕ ಸಾಕು ನಾಯಿಗಳು ಚಿರತೆಗೆ ಆಹಾರವಾಗಿತ್ತು ಎನ್ನಲಾಗಿದೆ.

ಸ್ಧಳಕ್ಕೆ ಐಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಚೌಟ, ಮೂಡಬಿದಿರೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಎಸಿಎಫ್ ಸತೀಶ್, ಕಿನ್ನಿಗೋಳಿ ಬೀಟ್ ಫಾರೇಸ್ಟರ್ ರಾಜು, ಎಲ್ ಜೆ.ಡಿ ಆರ್ ಎಫ್ ನಾಗೇಶ್ ಬಿಲ್ಲವ, ಬೀಟ್ ಫಾರೇಸ್ಟರ್ ಸಂತೋಷ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದು, ಚಿರತೆಯ ಶವವನ್ನು ಮಹಜರು ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

Related Posts

Leave a Reply

Your email address will not be published.