ಮಂಗಳೂರು: ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು ಮಹಾನಗರ ಪಾಲಿಕೆ, ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮ, ಮನವಿ ಪತ್ರ, ಲಾಂಛನ, ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವು ಬೆಂಗ್ರೆಯ ಫೆರಿ ಪಾಯಿಂಟ್‌ನಲ್ಲಿ ನಡೆಯಿತು.
ಮೀನುಗಾರಿಕಾ ಇಲಾಖೆಯ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ಇದೇ ವೇಳೆಯಲ್ಲಿ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭ ಮಾತನಾಡಿದ ಸಚಿವರಾದ ಮಂಕಾಳ ಎಸ್. ವೈದ್ಯ ಅವರು, ಬೆಂಗ್ರೆಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ನದಿ ತೀರದಿಂದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ಸ್ವಚ್ಛಗೊಳಸುತ್ತಿರುವುದು ಬೆಂಗ್ರೆಯಲ್ಲೇ ಪ್ರಥಮ. ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ 840 ಕೋಟಿ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಮೀನುಗಾರಿಕೆಗೆ ಹಾನಿಕಾರಕವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನದಿ ಅಥವಾ ಸಮುದ್ರದಿಂದ ಹೆಕ್ಕಿ ಸ್ವಚ್ಛಗೊಳಿಸುವ ಕಾರ್ಯ ಮಾಡಲಿದ್ದೇವೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಡಾ. ಮೃದುಳಾ ಲಕ್ಷ್ಮಣ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಮಂಗಳೂರು ಪಾಲಿಕೆಯ ಆಯುಕ್ತರಾದ ಆನಂದ್ ಸಿ.ಎಲ್, ಅಮೃತ ಮಹೋತ್ಸವ ಸಮಿತಿ, ವಿದ್ಯಾರ್ಥಿ ಸಂಘ ಬೆಂಗ್ರೆಯ ಮಹಾಜನ ಸಭಾ ಬೆಂಗ್ರೆಯ ಅಧ್ಯಕ್ಷರಾದ ಚೇತನ್ ಬೆಂಗ್ರೆ, ವಿದ್ಯಾರ್ಥಿ ಸಂಘ ಬೆಂಗ್ರೆಯ ಅಧ್ಯಕ್ಷರಾದ ಸಂಜಯ್ ಸುವರ್ಣ, ಅಮೃತ ಮಹೋತ್ಸವ ಸಮಿತಿ, ವಿದ್ಯಾರ್ಥಿ ಸಂಘ ಬೆಂಗ್ರೆಯ ಸಂಚಾಲಕರಾದ ವಿಜಯ್ ಸುವರ್ಣ ಮತ್ತು ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ನಂತರ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ಚಾಲನೆ ನೀಡಿದರು. ಜಿಲ್ಲೆಯಲ್ಲಿಯೇ ಪ್ರಥಮ ಬಾರಿ ಎರಡೂ ನದಿಗಳ ಸಂಗಮ ಸ್ಥಳ ಅಳಿವೆ ಬಾಗಿಲು ಮತ್ತು ಗಿಲ್ ನೆಟ್ ಮೂಲಕ ಸ್ವಚ್ಛತೆ ಮಾಡಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.