ಮಂಗಳೂರು|| ಕೇರಳದಲ್ಲಿ ಪ್ರಾರ್ಥನಾ ಮಂದಿರದಲ್ಲಿ ಸ್ಪೋಟ ಹಿನ್ನೆಲೆ: ಕರ್ನಾಟಕ ಗಡಿಭಾಗದಲ್ಲಿ ಹೈ ಅಲರ್ಟ್
ಕೇರಳ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ಪೋಟ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಗಡಿಭಾಗದಲ್ಲಿ ಅಲರ್ಟ್ ಇರುವಂತೆ ಡಿಜಿ, ಐಜಿಯವರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕೇರಳ ಗಡಿ ಭಾಗದಲ್ಲಿ ಭದ್ರತೆ, ನಿಗಾ ಹೆಚ್ಚಿಸಲಾಗುವುದು ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ದಸರಾ ಸಂದರ್ಭದಲ್ಲಿ ಮೈಸೂರು, ಕೊಡಗು ಮಂಗಳೂರಿನಲ್ಲಿ ಬೆದರಿಕೆ ಹಿನ್ನೆಲೆಯಲ್ಲಿ ಈ ಮೂರೂ ಕಡೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ತೆಗೆದುಕೊಂಡಿದ್ದೇವೆ ಎಂದರು.ಸೈಬರ್ ಕ್ರೈಮ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸುತ್ತಿದ್ದೇವೆ. ಅದನ್ನು ನ್ಯಾಷನಲ್, ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ನಲ್ಲಿ ಕೊಂಡೊಯ್ಯಲು ಕ್ರಮ ವಹಿಸುತ್ತಿದ್ದೇವೆ.
ಪಿಎಸ್‌ಐ ಹಗರಣ ಬಳಿಕ ಪೊಲೀಸ್ ನೇಮಕಾತಿ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರದ ಅಭಿಪ್ರಾಯ ಕೋರ್ಟಿಗೆ ತಿಳಿಸಿದ್ದೇವೆ. ಪರೀಕ್ಷೆ ಇನ್ನಿತರ ಪ್ರಕ್ರಿಯೆಗಳನ್ನು ನಡೆಸಬೇಕೆಂಬ ಬಗ್ಗೆ ಹೇಳಿದ್ದೇವೆ ಎಂದರು.