Mangaluru : ಹಿರಿಯ ನಾಗರಿಕರಿಗೆ ಬಸ್ಸಿನಲ್ಲಿ ಸೀಟು ಕೊಡಲ್ಲ ದೂರಿನ ಹಿನ್ನಲೆ ; ಬಸ್ ಹತ್ತಿ ಸೀಟ್ ವ್ಯವಸ್ಥೆ ಮಾಡಿದ ಎಎಸ್‍ಐ
ಹಿರಿಯ ನಾಗರಿಕರಿಗೆ ಬಸ್‍ನಲ್ಲಿ ಸೀಟ್ ವ್ಯವಸ್ಥೆಯಿಲ್ಲ ಎಂದು ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರು ಕೇಳಿ ಬಂದ ಬೆನ್ನಲ್ಲೇ ಎಎಸ್‍ಐ ಒಬ್ಬರು ಬಸ್ ಹತ್ತಿ ಸೀಟ್ ವ್ಯವಸ್ಥೆ ಮಾಡಿ ಪೊಲೀಸ್ ಕಮಿಷನರ್ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ನಮಗೆ ಬಸ್ ನಲ್ಲಿ ಸೀಟ್ ಮೀಸಲಾತಿ ಇದ್ದರೂ ಅದು ಪಾಲನೆಯಾಗುತ್ತಿಲ್ಲ ಎಂದು ದೂರಿದ್ದರು. ಅದರ ಬೆನ್ನಲ್ಲೇ ಪಾಂಡೇಶ್ವರ ಸಂಚಾರ ಪಶ್ಚಿಮ ಠಾಣಾ ಎಎಸ್‍ಐ ದಯಾನಂದ ಎಂಸಿಯವರು ಮರವೂರು ಬಳಿ ಸ್ವತಃ ಬಸ್ ತಪಾಸಣೆ ಮಾಡಿದ್ದಾರೆ. ಈ ವೇಳೆ ಅವರು ಹಿರಿಯ ನಾಗರಿಕರ, ಅಂಗವಿಕಲರ ಸೀಟ್ ನಲ್ಲಿ ಕುಳಿತವರನ್ನು ಎಬ್ಬಿಸಿ ಅಲ್ಲಿ ಹಿರಿಯ ನಾಗರಿಕರನ್ನು ಕೂರಿಸಿದ್ದಾರೆ.
ಅಲ್ಲದೆ, ಬಸ್ ಪ್ರಯಾಣಿಕರಿಗೆ, ಬಸ್ ನಿರ್ವಾಹಕರಿಗೆ ಈ ಬಗ್ಗೆ ಜಾಗೃತಿಯನ್ನು ಮೂಡಿಸಿ ಮುಂಭಾಗದ ಸೀಟ್ ಅನ್ನು ಹಿರಿಯ ನಾಗರಿಕರಿಗೆ ಮೀಸಲಿಡಬೇಕೆಂದು ತಾಕೀತು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಮಂಗಳೂರು ಫೋಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಅವರು ಟ್ರಾಫಿಕ್ ಎಎಸ್‍ಐ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.