ಮಂಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ, ಯು.ಟಿ ಖಾದರ್ ವೈಫಲ್ಯ: ಕುಂಟಾರು ರವೀಶ ತಂತ್ರಿ

ಮಂಗಳೂರು: ಕಳೆದ ಹಲವು ವರ್ಷಗಳಿಂದ ಮಂಗಳೂರು ಕ್ಷೇತ್ರದಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾದರೂ ಮೂಲಸೌಕರ್ಯವನ್ನು ಒದಗಿಸುವಲ್ಲಿ ಯು.ಟಿ.‌ಖಾದರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಕೇರಳ ಭಾಗದ ಉಸ್ತುವಾರಿ ಕುಂಟಾರು ರವೀಶ್ ತಂತ್ರಿ ಹೇಳಿದರು‌. ಮಂಗಳೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಲಿ ಶಾಸಕರು ಉಳ್ಳಾಲದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದರು.

ಒಳಚರಂಡಿ ವ್ಯವಸ್ಥೆ ಅಸಮರ್ಪಕ: ಸಾಕಷ್ಟು ಅನುದಾನ ಒದಗಿಸಿದ್ದರೂ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯಗತವಾಗಿಲ್ಲ. 2013 ರಲ್ಲಿ ಆಯ್ಕೆಗೊಂಡಾಗ ಕುಡಿಯುವ ನೀರಿನ ಸಂಪರ್ಕ ಯೋಜನೆ ಒದಗಿಸುವ ಭರವಸೆ ಹತ್ತು ವರ್ಷಗಳು ಕಳೆದರೂ ಪೂರ್ತಿಯಾಗಿಲ್ಲ ಎಂದು ತಂತ್ರಿ ಅವರು ಆರೋಪಿಸಿದರು.

ಕ್ಷೇತ್ರದಲ್ಲಿ ಸುತ್ತಾಟ ನಡೆಸಿದಾಗ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಅವರಿಗೆ ಜನರ ಬೆಂಬಲ ಕಂಡು ಬಂದಿದ್ದು ಅವರು ಈ ಸಲ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಜಯ ದಾಖಲಿಸಲಿದೆ ಎಂದರು. ಖಂಡನೆ: ಗಡಿನಾಡು ಕಾಸರಗೋಡಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಸಮಸ್ಯೆ ಬಗ್ಗೆ ಸ್ಪಂದಿಸದ ಆಡಳಿತಾರೂಢ ಎಡರಂಗ ಸರಕಾರವನ್ನು ಮತ್ತು ವಿರೋಧ ಪಕ್ಷ ಐಕ್ಯರಂಗ ಪಕ್ಷಗಳ ನಡೆಯನ್ನು ತೀವ್ರವಾಗಿ ಖಂಡಿಸಿದರು. ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಒದಗಿಸಿದ ಕೇಂದ್ರ ಸರಕಾರದ ಬಗ್ಗೆ ತುಟಿಪಿಟಿಕೆನ್ನದ ಕೇರಳ ಸರಕಾರವನ್ನು ಮತ್ತು ಕಣ್ಣೂರಿನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಶೋರ್ನೂರಿನಲ್ಲಿ ಕಾಂಗ್ರೆಸ್ ಸಂಸದರು ಅದಕ್ಕೆ ತಮ್ಮ ಹೆಸರಿನ ಸ್ಟಿಕ್ಕರ್ ಅನ್ನು ಅಂಟಿಸಿದ ಕ್ರಮವನ್ನು ತಂತ್ರಿ ಅವರು ಖಂಡಿಸಿದರು.

ಕೊರೊನಾ ಸಂದರ್ಭದಲ್ಲಿ ಕೇರಳ ಸರಕಾರದ ನಿರ್ಲಕ್ಷ್ಯ ದಿಂದ ಸರಿಯಾದ ಚಿಕಿತ್ಸೆ ದೊರೆಯದೇ ಕಾಸರಗೋಡು, ಕಣ್ಣೂರು ಜಿಲ್ಲೆಗಳ ನೂರಾರು ಮಂದಿ ಸಾವನ್ನಪ್ಪಿದ ಘಟನೆಯನ್ನು ಅವರು ನೆನಪಿಸಿದರು‌‌. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಜಗದೀಶ ಶೇಣವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ರಣದೀಪ್ ಕಾಂಚನ್, ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.