ಹಿರಿಯ ರಂಗಕರ್ಮಿ, ತರಬೇತುದಾರ, ಸಂಘಟಕ ಮಂಜು ವಿಟ್ಲ ಇನ್ನಿಲ್ಲ
ಬಂಟ್ವಾಳ: ಹಿರಿಯ ರಂಗಕರ್ಮಿ, ನಟ, ನಿರ್ದೇಶಕ, ತರಬೇತುದಾರ, ಸಂಘಟಕ, ಕಾರ್ಯಕ್ರಮ ನಿರೂಪಕ ಮಂಜು ವಿಟ್ಲ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿರುವ ಪುತ್ರಿ ಮನೆಯಲ್ಲಿ ಬುಧವಾರ ನಿಧನರಾದರು.ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಮತ್ತು ಕಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಮಂಜುವಿಟ್ಲ ಅವರು ಹಿರಿಯ ತರಬೇತುದಾರರಾಗಿ, ಚಿತ್ರಕಲಾವಿದರಾಗಿ, ಕಾರ್ಯಕ್ರಮ ನಿರೂಪಕರಾಗಿ, ರಂಗಕಲಾವಿದರಾಗಿ, ರಂಗ ನಿರ್ದೇಶಕರಾಗಿ, ವಿಮರ್ಷಕರಾಗಿ, ವಿವಿಧ ಸಂಘಟನೆಗಳು ಹಾಗೂ ಕಾರ್ಯಕ್ರಮಗಳ ಮಾರ್ಗದರ್ಶಕರಾಗಿ ಜನಾನುರಾಗಿಯಾಗಿದ್ದರು.
ಉದಯೋನ್ಮುಖ ಕಲಾವಿದರು ಎಂಬ ತಂಡದ ಮೂಲಕ 60ರ ದಶಕದಲ್ಲಿ ವಿಟ್ಲದ ಸಾಂಸ್ಕೃತಿಕ ಬದುಕಿಗೆ ಹೊಸ ಆಯಾಮವನ್ನು ನೀಡಿದ್ದ ಅವರು ಹಲವಾರು ಕಲಾತಂಡಗಳಿಗೆ, ಕಲಾವಿದರಿಗೆ ಮಾರ್ಗದಶರ್ಕರಾಗಿದ್ದರು. ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದುಕೊಂಡು ಅನೇಕ ಜನಪರ ಕಾರ್ಯಕ್ರಮಗಳ ಸಂಘಟನೆಯಲ್ಲಿಯೂ ತೊಡಗಿಸಿಕೊಂಡವರು.
ಮೈಸೂರಿನ ಅಬ್ದುಲ್ ನಝೀರ್‍ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ತರಬೇತುದಾರರಾಗಿದ್ದ ಅವರು ಪಡಿ ಮಂಗಳೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರದ ಮೂಲಕ ಶೈಕ್ಷಣಿಕ ಸುಧಾರಣಾ ಕಾರ್ಯಕ್ರಮದಲ್ಲೂ ಕ್ರಿಯಾಶೀಲರಾಗಿದ್ದರು. ಮೇಕಪ್ ಕಲಾವಿದರಾಗಿ, ಆವೆಮಣ್ಣಿನ ಮೂರ್ತಿ ರಚನೆಕಾರರಾಗಿಯೂ ಗುರುತಿಸಿಕೊಂಡಿದ್ದ ಮಂಜು ವಿಟ್ಲ ಬಂಟ್ವಾಳ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳ ಸಹಿತ ಹಲವಾರು ಕಾರ್ಯಕ್ರಮಗಳ ನಿರೂಪಕರಾಗಿ ಗಮನ ಸೆಳೆದಿದ್ದರು. ವಿಟ್ಲದಲ್ಲಿ ಉದಯೋನ್ಮುಖ ಕಲಾವಿದರು ತಂಡವನ್ನು ಹುಟ್ಟುಹಾಕಿ, ವಿ.ಮನೋಹರ್ ಸಹಿತ ಹಲವು ಕಲಾವಿದರನ್ನು ತಯಾರು ಮಾಡಿದ್ದ ಮಂಜು ವಿಟ್ಲ ಅವರು ಅನೇಕ ಸಂಘಟನೆಗಳಿಂದ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಪುತ್ರಿ, ಅಳಿಯ, ಸಹೋದರ, ಸಹೋದರಿಯರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.