ಮೂಡುಬಿದಿರೆ: ಪಂಚಾಯತ್ ಸಿಬ್ಬಂದಿ ಚಂದ್ರಹಾಸ್ ಗೆ ನುಡಿನಮನ
ಮೂಡುಬಿದಿರೆ: ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿರುವ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸಿಬಂದಿ ದಿ.ಚಂದ್ರಹಾಸ್ ಅವರಿಗೆ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮೂಡುಬಿದಿರೆ ತಾಲೂಕು ಪಂಚಾಯತ್, ತಾ.ಪಂ.ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರ ವತಿಯಿಂದ ಶನಿವಾರ ಸಮಾಜ ಮಂದಿರದಲ್ಲಿ ಶ್ರದ್ಧಾಂಜಲಿ ಅರ್ಪಿಸುವ ಸಭೆ ನಡೆಯಿತು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಸಭೆಯ ಅಧ್ಯಕ್ಷತೆ ವಹಿಸಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ ಓರ್ವ ಬಹುಮುಖ ಪ್ರತಿಭೆಯನ್ನು ಕಳಕೊಂಡಿರುವುದು ಇಲಾಖೆಗೆ ತುಂಬಾಲಾಗದ ನಷ್ಠವಾಗಿದೆ. ಇಲಾಖೆಯಲ್ಲಿ ದುಡಿಯುವ ಅಧಿಕಾರಿಗಳು ಮತ್ತು ಸಿಬಂದಿಗಳು ಒತ್ತಡದ ಜೀವನದಲ್ಲಿದ್ದಾರೆ. ಜವಾಬ್ದಾರಿಯುತವಾಗಿರುವ ತಾವು ಆರೋಗ್ಯದ ಬಗ್ಗೆ ಗಮನ ಹರಿಸಿ. ಮುಂದಿನ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಯೋಜನೆಯಿದ್ದು ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಮಾತನಾಡಿ ಪ್ರಾಮಾಣಿಕ ವ್ಯಕ್ತಿತ್ವದ ನಗು ಮೊಗದ ಸಿಬಂದಿ ಚಂದ್ರಹಾಸ್ ಅವರಲ್ಲಿ ಯಾವುದೇ ಕೆಲಸವನ್ನು ಹೇಳಿದಾಗಲೂ ನನ್ನಿಂದ ಆಗಲ್ಲವೆಂಬ ಮಾತು ಅವರಿಂದ ಎಂದೂ ಬಂದಿಲ್ಲ. ಉತ್ತಮ ಕರ್ತವ್ಯ ನಿಷ್ಟೆ ಹೊಂದಿದ್ದ ಆತನನ್ನು ನಾವು ಕಳೆದುಕೊಂಡಿದ್ದು ಪಂಚಾಯತ್ ನ ಆಸ್ತಿಯನ್ನು ಕಳೆದುಕೊಂಡಂತ್ತಾಗಿದೆ ಎಂದು ಶ್ರದ್ಧಾಜಲಿ ಅರ್ಪಿಸಿದರು.
ತಾ.ಪಂ.ನ ಪ್ರಭಾರ ಸಹಾಯಕ ನಿರ್ದೇಶಕ ಸಾಯೀಶ ಚೌಟ ಮಾತನಾಡಿ ಕಲಾವಿದ ಜತೆಗೆ ಉತ್ತಮ ಕ್ರೀಡಾಪಟು ಆಗಿದ್ದ ಚಂದ್ರಹಾಸ್ ಕರ್ತವ್ಯ ನಿಷ್ಠೆಯನ್ನು ಕಾಪಾಡಿಕೊಂಡಿಕೊಂಡಿದ್ದ. ಪದೋನ್ನತಿ ಹೊಂದಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಬೇಕಾಗಿದ್ದ ಯುವಕ. ಆದರೆ ಇಂದು ನಮ್ಮಿಂದ ಮರೆಯಾಗಿದ್ದಾನೆ. ಒತ್ತಡದ ಮಧ್ಯೆ ಆರೋಗ್ಯವನ್ನು ನಿರ್ಲಕ್ಷಿಸದಿರಿ ಎಂದರು.
ಪುತ್ತಿಗೆ ಗ್ರಾ.ಪಂ.ನ ಸಿಬಂದಿ ಸಂಜೀವ, ತಾ.ಪಂ.ನೌಕರರ ಸಂಘದ ಅಧ್ಯಕ್ಷೆ ನಯನಾ, ಕಲ್ಲಮುಂಡ್ಕೂರು ಗ್ರಾ.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.ತೆಂಕಮಿಜಾರು ಗ್ರಾ.ಪಂ.ಸಿಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.