ಮೂಡುಬಿದಿರೆ : ಶಿರ್ತಾಡಿ ಕಜೆ- ಹೊಸಂಗಡಿ ಸೇತುವೆ ಲೋಕಾರ್ಪಣೆ
ಮೂಡುಬಿದಿರೆ : ಗ್ರಾಮಸ್ಥರ ಬಹುಕಾಲದ ಬೇಡಿಕೆಯಾದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಿರ್ತಾಡಿ ಕಜೆ ಗುಂಡಡಪ್ಪು – ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಹೊಸಂಗಡಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ರಸ್ತೆ ನಿಧಿಯಿಂದ ರೂ.5 ಕೋಟಿ ವೆಚ್ಚದ ತಡೆಗೋಡೆ, ಕೂಡು ರಸ್ತೆ ಸಹಿತ ನಿರ್ಮಿಸಲಾದ ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಸಂಸದ ಕಟೀಲ್ ದ.ಕ.ಜಿಲ್ಲೆಗೆ ಗ್ರಾಮ ಸಡಕ್ ಯೋಜನೆಯ ಮೂಲಕ 400 ಕೋಟಿ ರೂ. ಹರಿದುಬಂದಿದೆ. ಕೇಂದ್ರೀಯ ರಸ್ತೆ ನಿಧಿಯಿಂದ 159 ಕೋಟಿ ಅನುದಾನ ಬಂದಿದೆ. ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥವಾಗುತ್ತಿದ್ದು ಪ್ರಯಾಣದ ಕಾಲ ತೀರಾ ಕಡಿಮೆಯಾಗಲಿದೆ.
ದೇಶದಲ್ಲಿ 2014ರಿಂದ ಮೋದಿ ನೇತೃತ್ವದ ಸರಕಾರದ ಮೂಲಕ ಅಭಿವೃದ್ಧಿ ಶಕೆ ಆರಂಭವಾಗಿದೆ. ಜನ ಅಭಿವೃದ್ಧಿ ಪರ ಸರಕಾರಗಳನ್ನು ನೆನಪಿಟ್ಡುಕೊಳ್ಳುತ್ತಾರೆ ಎಂದ ಅವರು ಕೇಂದ್ರದ ನಿಧಿಗಳನ್ನು ಶಾಸಕರು ಸಮರ್ಪಕವಾಗಿ ಬಳಸುವಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಈ ಸೇತುವೆಯ ಕೊಡುಗೆ ಗಾಗಿ ಸಂಸದರಿಗೆ ಕೃತಜ್ಞತೆ ಸಲ್ಲಿಸಿದರು. ಸಂಸದರನ್ನು ಗ್ರಾಮಸ್ಥರು ಸಮ್ಮಾನಿಸಿದರು.
ಶಿರ್ತಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ ಮಾಂಟ್ರಾಡಿ ಗ್ರಾ.ಪಂ. ಅಧ್ಯಕ್ಷ ಉದಯ ಪೂಜಾರಿ, ವಾಲ್ಪಾಡಿ ಗ್ರಾ.ಪಂ.ಸದಸ್ಯ ಪ್ರದೀಪ್, ಕಂದೀರು ಕ್ಷೇತ್ರದ ಅರ್ಚಕ, ಆಡಳಿತದಾರ ಸೋಮನಾಥ ಶಾಂತಿ, ಶಿರ್ತಾಡಿ ಯ ಡಾ. ಅನಿಲ್ ಡಿಸೋಜ, ಪುರಸಭಾ ಸದಸ್ಯೆ ಕುಶಲ ಯಶೋಧರ, ದಿನೇಶ್ ಕುಮಾರ್ , ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ರಂಜಿತ್ ಪೂಜಾರಿ, ವಿವಿಧ ಗ್ರಾ.ಪಂ.ಸದಸ್ಯರು , ಗ್ರಾಮಸ್ಥರು ಇದ್ದರು. ಸಂತೋಷ್ ಶೆಟ್ಟಿ ನಿರೂಪಿಸಿದರು.