ಮೂಡುಬಿದಿರೆ: ಶಿರ್ತಾಡಿ ಶ್ರೀ ಕ್ಷೇತ್ರ ಅರ್ಜುನಾಪುರ ಬ್ರಹ್ಮಕಲಶೋತ್ಸವ – ಧಾರ್ಮಿಕ ಸಭೆ

ಮೂಡುಬಿದಿರೆ: ಶಿವತತ್ವ ಶ್ರೇಷ್ಠವಾದುದು. ಶಿವ ಅದಿ-ಅಂತ್ಯ ರಹಿತವಾದ ದೇವರು. ಆತ ನಮ್ಮ ಹೃದಯದೊಳಗೆ ಇದ್ದಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಾನೆ. ಹೊರಗಡೆ ಬಂದಾಗ ಆತ ಒಬ್ಬನೇ ಆದ್ದರಿಂದ ಆತ ನಮ್ಮೊಳಗಡೆ ಇರುವಾಗಲೇ ಜಾಗೃತಿಯನ್ನು ಹೊಂದಬೇಕು ಎಂದು ಒಡಿಯೂರು ಗುರುದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಅವರು ಶಿರ್ತಾಡಿ ಶ್ರೀ ಕ್ಷೇತ್ರ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಊರಿನಲ್ಲಿ ಒಳ್ಳೆಯ ಕೆಲಸಗಳು ಆಗಬೇಕಾದರೆ ಒಳ್ಳೆ ಮನಸ್ಸಿನ ಜನರಿರಬೇಕು, ಸ್ನಾನದಿಂದ ಶರೀರ ಶುದ್ಧಿಯಾಗುತ್ತದೆ, ಮೌನದಿಂದ ಮನಸ್ಸು ಶುದ್ಧಿಯಾಗುತ್ತದೆ ಅದರಂತೆ ದಾನ ಮಾಡಿದರೆ ಸಂಪತ್ತು ಶುದ್ಧಿಯಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಜತೆಗೆ ಸತ್ಕರ್ಮ ಮಾಡಿದ ಫಲಗಳು ನಮಗೆ ಲಭಿಸುತ್ತದೆ ಎಂದರು.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಆಶೀರ್ವಚನ ನೀಡಿದರು.


ಅಧ್ಯಕ್ಷತೆ ವಹಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಈ ಕ್ಷೇತ್ರದ ಜೀರ್ಣೊದ್ಧಾರಕ್ಕಾಗಿ ಭಕ್ತರ ಕೋರಿಕೆಯಂತೆ ಆಸ್ತಿಕರನ್ನೊಳಗೊಂಡ ವ್ಯವಸ್ಥಾಪನ ಸಮಿತಿ ರಚಿಸಲಾಗಿದೆ. ಕಡಿಮೆ ಅವಧಿಯಲ್ಲಿ ದೇವಾಲಯ ನಿರ್ಮಾಣವಾಗಿದೆ. ಊರಿನ ಸಂಪರ್ಕಕ್ಕಾಗಿ 2.60 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ದೇವಸ್ಥಾನಕ್ಕೆ ಬೇಕಾದ ಮರಮಟ್ಟುಗಳನ್ನು ಒದಗಿಸಿದ್ದು ಮುಂದೆಯೂ ಸಹಕಾರ ನೀಡುವುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ದೇವಾಲಯ ವಾಸ್ತುಶಿಲ್ಪಿ ಕಾರ್ಕಳ ಶಿಲ್ಪಗ್ರಾಮದ ಸತೀಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು ಹಾಗೂ ಕ್ಷೇತ್ರಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ಯಾಜ್ಯ, ಪುಣೆಯ ಖ್ಯಾತ ವೈದ್ಯ ಡಾ. ಸುಧಾಕರ ಈಶ್ವರ ಶೆಟ್ಟಿ, ಪುಣೆಯ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಹೆಗ್ಡೆ, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಉದ್ಯಮಿಗಳಾದ ಸತೀಶ್ ರೈ, ರೋಹಿತ್ ಶೆಟ್ಟಿ, ಪ್ರವೀಣ್ ಕಾರ್ಕಳ, ಶಿರ್ತಾಡಿ ಸವಚೇತನ ಕ್ಲಿನಿಕ್‌ನ ಡಾ. ಕೃಷ್ಣರಾಜ್, ಮೂಡಾದ ಮಾಜಿ ಅಧ್ಯಕ್ಷ ಮೇಘನಾಥ್ ಶೆಟ್ಟಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸುದೀಪ್ ಬುನ್ನನ್ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ ಕೋಂಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿ, ಜೀಣೋದ್ದಾರ ಸಮಿತಿಯ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಸೇವಾ ಸಮಿತಿಯ ಬಲರಾಮ್ ಪ್ರಸಾದ್ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಅಳಿಯೂರು ವಂದಿಸಿದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.

Related Posts

Leave a Reply

Your email address will not be published.