ಮೂಡುಮಾರ್ನಾಡು ಸರಕಾರಿ ಶಾಲೆಯಲ್ಲಿ ಕಂಗೊಳಿಸುತ್ತಿರುವ ಅಡಿಕೆ ತೋಟ

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಕೇವಲ ಭಾಷಣದಲ್ಲಿ ಬೀಗಿದರೆ ಸಾಲದು ಬದಲಾಗಿ ಸರಕಾರಿ ಶಾಲೆಗಳನ್ನು ಹೇಗೆ ಉಳಿಸಿ ಬೆಳೆಸಬಹುದು ಎಂಬ ಚಿಂತನೆಯೂ ಬೇಕು. ಅಂತಹ ಚಿಂತನೆಯೊಂದನ್ನು ಮಾಡಿ ಶಾಲೆಗಳಾಗಿ ಶಾಶ್ವತ ಯೋಜನೆಯನ್ನು ರೂಪಿಸಿ ಮಕ್ಕಳ ಮತ್ತು ಶಾಲಾಭಿಮಾನಿಗಳ ಮನಗೆದ್ದ ಜನಪ್ರತಿನಿಧಿ ಪಡುಮಾರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಾಥ್ ಸುವರ್ಣ ಅವರು.

ಪಡುಮಾರ್ನಾಡು ಗ್ರಾ.ಪಂ. ವ್ಯಾಪ್ತಿಯ ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಮಾರ್ನಾಡು 2018-19ರಲ್ಲಿ ಶತಮಾನೋತ್ಸವವನ್ನು ಕಂಡಿದೆ. ಇದರ ಸವಿನೆನಪಿಗಾಗಿ ಅಂದು ಪಡುಮಾರ್ನಾಡು ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ಇದೀಗ ಹಾಲಿ ಸದಸ್ಯರಾಗಿರುವ ಶ್ರೀನಾಥ್ ಎನ್.ಸುವರ್ಣ ಅವರು ಶಾಲೆಗೆ ಏನಾದರೂ ಸಹಕಾರ ನೀಡಬೇಕು ಅದು ಶಾಶ್ವತವಾಗಿ ಉಳಿಯುವಂತ್ತಾಗಬೇಕು ಎಂಬ ಕನಸನ್ನು ಕಂಡಿದ್ದರು. ಅದರಂತೆ ಅಡಿಕೆ ತೋಟವನ್ನು ಮಾಡುವ ಎಂದು ಹೇಳಿದರು. ಸಮಿತಿಯ ಎಲ್ಲರ ಒಪ್ಪಿಗೆಯ ಮೇರೆಗೆ ಅಡಿಕೆ ತೋಟ ನಿರ್ಮಿಸುವುದೆಂದು ತೀರ್ಮಾನಿಸಲಾಗಿತ್ತು.

ಶಾಲೆಗೆ ಸಂಬಂಧಪಟ್ಟಂತೆ ಸುಮಾರು 4.22 ಎಕ್ರೆ ಜಾಗವಿದ್ದು ಅದರಲ್ಲಿ ಶಾಲೆಯ ಮುಂದೆ ಎಡಭಾಗದಲ್ಲಿರುವ ಜಾಗದಲ್ಲಿ ಉದ್ಯೋಗ ಖಾತರಿ ಯೋಜನೆಯ 30,000 ಅನುದಾನವನ್ನು ವಿನಿಯೋಗಿಸಿ 325 ಅಡಿಕೆ ಗಿಡಗಳನ್ನು ನೆಟ್ಟು ತೋಟವನ್ನು ನಿರ್ಮಿಸಲಾಗಿದ್ದು ಇದೀಗ ಅಡಿಕೆ ಗಿಡಗಳು ಹಚ್ಚ ಹಸಿರಾಗಿ ಬೆಳೆದು ನಿಂತು ಫಸಲನ್ನು ನೀಡಲು ಪ್ರಾರಂಭಿಸಿವೆ. ತೋಟದ ನಂತರದ ಅಭಿವೃದ್ಧಿ ಕೆಲಸಗಳಿಗೆ ರೂ ಎರಡೂವರೆ ಲಕ್ಷದಷ್ಟು ಹಣವನ್ನು ತಾನೇ ಸ್ವತ: ಖರ್ಚು ಮಾಡಿದ್ದಾರೆ ಶ್ರೀನಾಥ್ ಸುವರ್ಣ ಅವರು.

ಮೂಡುಮಾರ್ನಾಡು ಶಾಲೆಯಲ್ಲಿ 160ರಷ್ಟು ವಿದ್ಯಾರ್ಥಿಗಳು ಇದ್ದಾರೆ. ಕಳೆದ ವರ್ಷ ಜಿಲ್ಲಾ ಮಟ್ಟದ ” ಅತ್ಯುತ್ತಮ ಹಸಿರು ಶಾಲೆ-2022″ ಎಂಬ ಪ್ರಶಸ್ತಿಯನ್ನು ಕೂಡಾ ಈ ಶಾಲೆಯು ಪಡೆದುಕೊಂಡಿದೆ. ಶ್ರೀನಾಥ್ ಸುವರ್ಣ ಅವರು ಓರ್ವ ಉತ್ತಮ ವ್ಯಕ್ತಿ. ಶಾಲೆಯ ಬಗ್ಗೆ ಅವರಿಗೆ ಅಪಾರ ಅಭಿಮಾನವಿದೆ. ಅವರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿಯವರು ಜತೆ ಸೇರಿ ಎರಡು ವರ್ಷಗಳ ಹಿಂದೆ ಅಡಿಕೆ ತೋಟ ನಿರ್ಮಿಸುವ ಮೂಲಕ ಶಾಶ್ವತ ಕೊಡುಗೆಯನ್ನು ನೀಡಿದ್ದಾರೆ. ಶಾಲೆಯ ಮಕ್ಕಳು ಮತ್ತು ಶಿಕ್ಷಕ ವೃಂದ ಅವರಿಗೆ ಚಿರ ಋಣಿಗಳಾಗಿದ್ದೇವೆ ಎಂದು ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಡಿ”ಸೋಜಾ ಹೇಳುತ್ತಾರೆ.

ತಾನು ಕಲಿತ ಶಾಲೆ ಅಲ್ಲದಿದ್ದರೂ ಶತಮಾನೋತ್ಸವ ಕಂಡ ತನ್ನ ಊರಿನ ಶಾಲೆಗೆ ಏನಾದರೂ ಶಾಶ್ವತವಾದ ಕೊಡುಗೆ ನೀಡಬೇಕೆಂದುಕೊಂಡಿದ್ದೆ. ಅದರಂತೆ ನಾಲ್ಕು ವರ್ಷಗಳ ಹಿಂದೆ ತಾನು ಪಂಚಾಯತ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮೂಡುಮಾರ್ನಾಡು ಶಾಲೆಗೆ ಅಡಿಕೆ ತೋಟವನ್ನು ನಿರ್ಮಿಸಲಾಗಿದೆ. ಇದೀಗ ಫಸಲು ನೀಡಲು ಆರಂಭವಾಗಿದೆ. ಈ ವರ್ಷ ಅಡಿಕೆ ಫಸಲಿನಿಂದ 15ರಿಂದ 20 ಸಾವಿರದಷ್ಟು ಹಣ ಬಂದಿದ್ದು ಶಾಲೆಗೆ ಸಿಸಿ ಕೆಮರಾವನ್ನು ಅಳವಡಿಸುವ ಯೋಚನೆಯಿದೆ. ಮುಂದಿನ ವರ್ಷ ತೋಟದಿಂದ ಬರುವ ಫಸಲಿನಿಂದ ಶಾಲಾ ಮಕ್ಕಳಿಗಾಗಿ ವಾಹನವನ್ನು ಖರೀದಿಸುವ ಅಲೋಚನೆಯಿದೆ ಎಂದು ಶ್ರೀನಾಥ್ ಸುವರ್ಣ ಸುವರ್ಣ ಹೇಳುತ್ತಾರೆ.

ಶಾಲೆಗಳಿಗಾಗಿ ಇಂತಹ ಉತ್ತಮ ಕಾರ್ಯಗಳನ್ನು ಜನಪ್ರತಿನಿಧಿಗಳು, ಊರಿನ ಗಣ್ಯರು ಕೈಗೆತ್ತಿಕೊಂಡರೆ ಮುಚ್ಚುತ್ತಿರುವ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿದಂತ್ತಾಗುತ್ತದೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕಾಗಿದೆ.

Related Posts

Leave a Reply

Your email address will not be published.