ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಜಗನ್ನಿಯಾಮಕನಾದ ಭಗವಂತನಿಗೆ ನಾವು ಪ್ರತಿಷ್ಠೆ, ಬ್ರಹ್ಮಕಲಶ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ದೇವಸ್ಥಾನ ಕಟ್ಟಿ ಪ್ರತಿಷ್ಠಾದಿ ಉತ್ಸವಗಳನ್ನು ಮಾಡುವುದರ ಹಿಂದೆ ಆತ್ಮ ಸಾಕ್ಷಾತ್ಕಾರದ ಒಳಮರ್ಮವಿದೆ. ಮನುಷ್ಯ ತನ್ನ ಬದುಕು ಹಸನು ಮಾಡಿಕೊಳ್ಳಲು ಧರ್ಮದ ಹಾದಿಯಲ್ಲಿ ನಡೆಯಬೇಕು. ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕೂಡ ಧರ್ಮಜೀವನಕ್ಕೆ ಒಂದು ಮೆಟ್ಟಿಲಾಗಿ ಫಲ ನೀಡುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ 3ನೇ ದಿನ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಒಳಗಣ್ಣಿನಿಂದ ನೋಡಿದಾಗ ಸತ್ಯ ತಿಳಿಯುತ್ತದೆ ಎಂದು ಜ್ಞಾನಿಗಳು ಹೇಳಿದ್ದಾರೆ. ದೇವಾಲಯದಲ್ಲಿ ಮಾಡುವ ಧರ್ಮಸಾಧನೆಗಳು ಈ ಒಳಗಣ್ಣಿನ ಅಂತರ್‌ದೃಷ್ಟಿಯನ್ನು ಹೆಚ್ಚಿಸುತ್ತದೆ. ಬ್ರಹ್ಮಕಲಶೋತ್ಸವ ದೇವರಿಗೆ ಮಾಡುವ ಮೂಲಕ ನಾವು ನಮ್ಮ ಬದುಕನ್ನು ಧರ್ಮಿಷ್ಟಗೊಳಿಸಲು ಸಾಧ್ಯವಿದೆ. ಪುಟ್ಟ ಮಕ್ಕಳಲ್ಲಿರುವ ಮುಗ್ಧತೆ ನಮಗೆ ಬಂದಾಗ ದೇವರಿಗೆ ಹತ್ತಿರವಾಗಲು ಸಾಧ್ಯ. ಇದಕ್ಕೆ ಧ್ರುವ ಅತ್ಯಂತ ಉತ್ತಮ ಉದಾಹರಣೆ. ದ್ರುವನ ಕಥೆಯಲ್ಲಿ ಬರುವ ಸುನೀತಿ ಮತ್ತು ಸುರುಚಿ ಎಂಬಿಬ್ಬರು ಮಾತೆಯರ ಪಾತ್ರದಲ್ಲಿ ನಮಗೆ ಪಾಠವಿದೆ. ಆಧುನಿಕ ಜಗತ್ತಿನಲ್ಲಿ ಯಾರಿಗೂ ಸುನೀತಿ ಬೇಕಾಗಿಲ್ಲ, ಸುರುಚಿಯೇ ಬೇಕಾಗಿದೆ. ಇದೇ ನಮ್ಮ ಅಧಃಪತನಕ್ಕೆ ಕಾರಣ ಎಂದು ಶ್ರೀಗಳು ಹೇಳಿದರು.
ದೇವರಿಗೆ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶೋತ್ಸವ ಮಾಡುತ್ತೇವೆ. ಇದು ನಮಗೆ 12 ದಿನಗಳ ಪುಣ್ಯಫಲ ನೀಡುತ್ತದೆ. ದೇವರು ನೀಡುವ 12 ದಿನಗಳ ಪುಣ್ಯಫಲ 120 ವರ್ಷಗಳ ಆಯುಷ್ಯಕ್ಕೆ ಸಮಾನ ಎಂದು ಹೇಳಿದ ಶ್ರೀಗಳು, ಸುಬ್ರಹ್ಮಣ್ಯ ದೇವರು ಬೆಳಕಿನ ಸಂಕೇತ. ಅಂಥ ಬೆಳಕಿನಲ್ಲಿ ಬೆಳಕು ಹುಡುಕುವ ಕೆಲಸ ಇಲ್ಲಿ ನಡೆದಿದೆ ಎಂದರು.

ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸಂಚಾಲಕರಾದ ಸವಣೂರು ಸೀತಾರಾಮ ರೈ ಮಾತನಾಡಿ, ಕೋಟಿಕಟ್ಟಲೆ ಖರ್ಚು ಮಾಡಿ ಬ್ರಹ್ಮಕಲಶೋತ್ಸವ ನಡೆದ ಅನೇಕ ದೇವಸ್ಥಾನಗಳಲ್ಲಿ ಬಳಿಕ ಭಕ್ತರ ಕೊರತೆ ಎದುರಾಗುವುದನ್ನು ಕಂಡಿದ್ದೇವೆ. ಯುವಕರು ಹೆಚ್ಚೆಚ್ಚು ದೇವಸ್ಥಾನಗಳಿಗೆ ಬಂದು ಹೋಗುವ ಪದ್ಧತಿ ರೂಢಿ ಮಾಡಿಕೊಳ್ಳಬೇಕು ಎಂದರು.

ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮದ ವಿರುದ್ಧ ವ್ಯಾಖ್ಯಾನಗಳು ನಡೆಯುತ್ತಿರುವ ದಿನಮಾನಗಳಲ್ಲಿ ಹಿಂದೂ ಸಮಾಜ ಜಾಗೃತಾವಸ್ಥೆಯಲ್ಲಿರಬೇಕು. ಧರ್ಮಕ್ಕಾಗಿ ತ್ಯಾಗ ಮನೋಭಾವದಿಂದ ಕೆಲಸ ಮಾಡುವ ಪ್ರವೃತ್ತಿ ಬೆಳೆಯಬೇಕು ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಗನಿಗೆ 2 ನಾಲಿಗೆಯಿದ್ದರೂ, ಮಾತು ಒಂದೇ. ಮನುಷ್ಯರಿಗೆ ನಾಲಿಗೆ ಒಂದೇ ಇದ್ದರೂ ಮಾತು ಹಲವು ಎಂದಾಗಿದೆ. ಇಂಥ ಕಾಲಘಟ್ಟದಲ್ಲಿ ಧರ್ಮಕ್ಷೇತ್ರದ ಬ್ರಹ್ಮಕಲಶದಂಥ ಪುಣ್ಯ ಕಾರ್ಯವನ್ನು ಸಂತೋಷ್ ರೈ ಅವರು ಎಲ್ಲರನ್ನು ಸೇರಿಸಿಕೊಂಡು ಅದ್ಭುತವಾಗಿ ಮಾಡಿದ್ದಾರೆ ಎಂದರು.

ಕೆಯ್ಯೂರು ಕೆಪಿಎಸ್ ಕಾರ್ಯಾಧ್ಯಕ್ಷರಾದ ಎ.ಕೆ. ಜಯರಾಮ ರೈ, ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಿವನಾಥ ರೈ ಮೇಗಿನಗುತ್ತು, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಾಮದಾಸ ರೈ, ವೈದಿಕ ಸಮಿತಿ ಸಂಚಾಲಕ ಹರಿಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ರಘುನಾಥ ರೈ ನಡುಕೂಟೇಲು ಉಪಸ್ಥಿತರಿದ್ದರು.


ಫೆ.19ರಂದು ಬೆಳಿಗ್ಗೆ ಹಾಗೂ ರಾತ್ರಿ ದಾಖಲೆಯ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.


ನಳೀಲು ಕ್ಷೇತ್ರಕ್ಕೆ ಅನ್ಯಾನ್ಯ ರೀತಿಯಲ್ಲಿ ಸೇವೆ ಸಲ್ಲಿಸಿದ ಸುಧೀರ್ ಕಟ್ಟಪುಣಿ, ವೆಂಕಟರಮಣ ಆಚಾರ್ಯ, ಗೋಪಾಲ ಆಚಾರ್ಯ, ಪದ್ಮನಾಭ ಶೇರಿಗಾರ್ ಅರಿಯಡ್ಕ ಅವರನ್ನು ದೇವಳದ ವತಿಯಿಂದ ಸ್ವಾಮೀಜಿ ಸನ್ಮಾನಿಸಿದರು. ನಳೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು. ವಿಜೇತ್ ರೈ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಾವತಿ ರೈ ಪಾಲ್ತಾಡಿ ವಂದಿಸಿದರು.

ಫೆ.20ರಂದು ಬೆಳಿಗ್ಗೆ ಉಷೆಪೂಜೆ,ಅಂಕುರ ಪೂಜೆ,ಮಹಾಗಣಪತಿ ಹೋಮ,ತ್ರಿಕಾಲ ಪೂಜೆ,ಸೃಷ್ಟಿ ತತ್ವ ಹೋಮ,ತತ್ವಕಲಶಪೂಜೆ,ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ,ಶ್ರೀ ಭಕ್ತಿ ಸ್ವರ ಮಹಿಳಾ ಭಜನಾ ಮಂಡಳಿ ಬೊಳಿಕ್ಕಳ ಹಾಗೂ ಮಹಾವಿಷ್ಣು ಭಜನಾ ಮಂಡಳಿ ಮೊಗರು ಸವಣೂರು ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ ,ಅನ್ನ ಸಂತರ್ಪಣೆ,
ಸಂಜೆ ದೀಪಾರಾಧನೆ,ತ್ರಿಕಾಲ ಪೂಜೆ,ಮಹಾಪೂಜೆ ,ದೈವಸ್ಥಾನದಲ್ಲಿ ಪ್ರಾಸಾದ ಶುದ್ದಿ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ,ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪರಾಹ್ನ ಶ್ರವಣರಂಗ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ ಗಾಂಗೇಯ ಪ್ರತಾಪ ,ಮಣಿಕ್ಕರ ಸರಕಾರಿ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಜಾಝ್ & ಮ್ಯೂಸಿಕ್ ಪಾಲ್ತಾಡು ಇವರಿಂದ ಸಂಗೀತ ರಸಮಂಜರಿ ,ರಾತ್ರಿ ಮಯೂರ ಪ್ರತಿಷ್ಠಾನ ಮಂಗಳೂರು ಇವರಿಂದ ಶರಣ ಸೇವಾರತ್ನ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.

Related Posts

Leave a Reply

Your email address will not be published.