ರೈಲು ನಿಲ್ಲಿಸುವ ಮೂಲಕ ಅಪಘಾತ ತಪ್ಪಿಸಿದ ಮಹಿಳೆ

ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿದ 70 ವರ್ಷ ಪ್ರಾಯದ  ಮಹಿಳೆ ತತ್‌ಕ್ಷಣವೇ ಎಚ್ಚೆತ್ತುಕೊಂಡು ಸಮಯಪ್ರಜ್ಞೆಯಿಂದ ಕೆಂಪುಬಟ್ಟೆ ಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದಾರೆ. ಪಡೀಲ್ ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪ ಮಂದಾರ ದಲ್ಲಿ ಈ ಘಟನೆ ಸಂಭವಿ ಸಿದ್ದು, ಕುಡುಪು ಆಯರ ಮನೆ ಚಂದ್ರಾವತಿ ಅವರು ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದವರು.

ಮಾ. 21ರಂದು ಮಧ್ಯಾಹ್ನ ಸುಮಾರು 2.10ರ ಸುಮಾರಿಗೆ ರೈಲು ಹಳಿಗೆ ಮರ ಬಿದ್ದಿತ್ತು. ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನು ತತ್‌ಕ್ಷಣವೇ ಗಮನಿಸಿದ 70 ವರ್ಷ ಪ್ರಾಯದ ಚಂದ್ರಾವತಿ ಅವರು ಏನು ಮಾಡಬೇಕು ಎಂದು ತೋಚದೆ, ತತ್‌ಕ್ಷಣವೇ ಮನೆಯಲ್ಲಿದ್ದ ಕೆಂಪು ವಸ್ತ್ರವನ್ನು ತಂದು ರೈಲು ಬರುವ ಸಮಯಕ್ಕೆ ಪ್ರದರ್ಶಿಸಿ ಲೋಕೋಪೈಲೆಟ್ ಅವರ ಗಮನ ಸೆಳೆದರು. ಅಪಾಯ ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಕೆಲವರು ಸೇರಿ ಮರ ತೆರವು ಮಾಡಿದರು.

ಚಂದ್ರಾವತಿ ಆಗಷ್ಟೇ ಊಟ ಮಾಡಿ ಮನೆಯ ಅಂಗಳದಲ್ಲಿದ್ದರು. ಅವರ ಅಕ್ಕ ಮನೆಯಲ್ಲಿ ಮಲಗಿದ್ದರು. ಅದೇ ವೇಳೆ ಮನೆ ಎದುರಿನ ರೈಲು ಹಳಿಗೆ ಏನೋ ಬಿದ್ದ ಶಬ್ದ ಕೇಳಿತು. ಬಂದು ನೋಡಿದಾಗ ದೊಡ್ಡ ಮರ ಹಳಿಯಲ್ಲಿತ್ತು. ಅದೇ ವೇಳೆಗೆ ಮುಂಬಯಿ ರೈಲು ಸಂಚರಿಸುವ ಬಗ್ಗೆ ಗೊತ್ತಿತ್ತು. ಏನು ಮಾಡಬೇಕು ಎಂದು ತತ್‌ಕ್ಷಣಕ್ಕೆ ಗೊತ್ತಾಗಲಿಲ್ಲ. ಯಾರಿಗಾದರೂ ಕರೆ ಮಾಡಿ ತಿಳಿಸುವ ಎಂದು ಮನೆಗೆ ಬಂದರು . ಆಗ ರೈಲಿನ ಹಾರ್ನ್ ಕೇಳಿಸಿತು. ಆಗ ದೇವರ ದಯೆಯಿಂದ ಅಲ್ಲೇ ಕೆಂಪು ಬಟ್ಟೆ ಕಂಡಿತು. ಅದನ್ನೇ ಹಿಡಿದು ಹಳಿಯ ಬಳಿಗೆ ಓಡಿದೆ. ನನಗೆ ಹೃದಯದ ಆಪರೇಷನ್ ಆಗಿತ್ತು. ಆದರೂ ಲೆಕ್ಕಿಸದೆ ಓಡಿ ಬಂದೆ ಎಂದವರು ಹೇಳಿದ್ದಾರೆ ಚಂದ್ರಾವತಿ.

ಆಯರಮನೆ ಸಮೀಪ ರೈಲ್ವೇ ಹಳಿಗೆ ಮರ ಬಿದ್ದಿತ್ತು. ಇದೇ ಸಮಯಕ್ಕೆ ರೈಲು ಬರುವುದನ್ನು ಅರಿತಿದ್ದ ಚಂದ್ರಾವತಿ ಅವರು ಕೆಂಪು ಬಟ್ಟೆ ತಂದು ಇನ್ನೊಂದು ಹಳಿಯಲ್ಲಿ ನಿಂತು ರೈಲು ನಿಲ್ಲಿಸಲು ಸೂಚನೆ ನೀಡಿದರು. ಮಾಹಿತಿ ತಿಳಿದು ನಾನು, ಬಾಲಕೃಷ್ಣ ಕಾರಂತ ಸಹಿತ ಸ್ಥಳೀಯರು ಸೇರಿದೆವು. ಎಲ್ಲರ ಸಹಕಾರದಿಂದ ಬಳಿಕ ಮರ ತೆರವು ಮಾಡಿದೆವು. ಸುಮಾರು ಅರ್ಧ ತಾಸು ರೈಲು ನಿಲುಗಡೆಯಾಗಿತ್ತು. ಬಳಿಕ ತೆರಳಿದೆ ಎನ್ನುತ್ತಾರೆ ಸ್ಥಳೀಯರಾದ ಅನಂತ ಕಾರಂತ.

ಕೆಲವು ವರ್ಷಗಳ ಹಿಂದೆ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದ ಕೃಷಿಕ ಪ್ರಾಂಕ್ಲಿನ್ ಫೆರ್ನಾಂಡಿಸ್ ಅವರು ರಥಪುಷ್ಪದ ಹೂವನ್ನು ಕೈಯಲ್ಲಿ ಹಿಡಿದು ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Related Posts

Leave a Reply

Your email address will not be published.