ಪಡುಬಿದ್ರಿ: ಕಾರುಗಳೆರಡರ ಒವರ್ ಟೇಕ್ ಭರಾಟೆ, ಎರಡೂ ಕಾರುಗಳು ಪಲ್ಟಿ, ಒರ್ವನಿಗೆ ಗಾಯ..
ಒವರ್ ಟೇಕ್ ಭರಾಟೆಯಿಂದ ಮುನ್ನುಗ್ಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎರಡೂ ಕಾರುಗಳು ಗದ್ದೆಗೆ ಉರುಳಿದ ಘಟನೆ ಪಡುಬಿದ್ರಿಯ ಅಲಂಗಾರು ಬಳಿ ನಡೆದಿದೆ.
ಕುಂದಾಪುರ ಮೂಲದ ಐ ಟೆನ್ ಕಾರು ಹಾಗೂ ಕೋಟ ಮೂಲದ ಶಿಪ್ಟ್ ಕಾರು ಅಪಘಾತಕ್ಕೆ ತುತ್ತಾಗಿದೆ. ಎರಡೂ ಕಾರುಗಳಲ್ಲೂ ಚಾಲಕರು ಮಾತ್ರ ಇದ್ದು ಶಿಪ್ಟ್ ಕಾರಿನ ಚಾಲಕ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಭಾಗದಲ್ಲಿ ಹೆದ್ದಾರಿ ಬಹಳ ಅಪಾಯಕಾರಿ ತಿರುವು ಹೊಂದಿದ್ದು, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮೊದಲು ಸಿಂಗಲ್ ರಸ್ತೆ ಇರುವಾಗಲೂ ಈ ತಿರುವಿನಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿ ಪ್ರಾಣಹಾನಿ ಸಂಭವಿಸಿದೆ.
ರಸ್ತೆ ಚತುಷ್ಪಥಗೊಳ್ಳುವ ಸಂದರ್ಭದಲ್ಲೂ ಹೆದ್ದಾರಿ ನೇರಗೊಳಿಸುವ ಪ್ರಕ್ರಿಯೆ ನಡೆಸದ ಕಾರಣ ಈಗಲೂ ಆ ತಿರುವು ಬಹಳಷ್ಟು ಅಪಘಾತಗಳಿಗೆ ನಾಂದಿಯಾಗುತ್ತಿದೆ. ಈ ಭಾಗದಲ್ಲಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಪಕ್ಕದ ಗದ್ದೆಗೆ ಉರುಳುತ್ತಿದ್ದರೂ ಹೆದ್ದಾರಿ ಇಲಾಖೆ ತನಗೆ ಸಂಬಂಧವೇ ಇಲ್ಲದಂದೆ ವರ್ತಿಸುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪ. ಹೆಜಮಾಡಿ ಟೋಲ್ ಸಿಬ್ಬಂದಿಗಳು ವಾಹನಗಳ ತೆರವು ಕಾರ್ಯ ನಡೆಸಿದರು. ಪಡುಬಿದ್ರಿ ಪೊಲೀಸರು ಪರಿಶೀಲನೆ ನಡೆಸಿ ವಾಹನಗಳನ್ನು ಠಾಣೆಗೆ ಸಾಗಿಸಿದ್ದಾರೆ.