ಪುತ್ತೂರು: ಫೆ.18ರಂದು ದ್ವಾರಕೋತ್ಸವ
ಪುತ್ತೂರು: ಪುತ್ತೂರಿನ ದ್ವಾರಕಾ ಪ್ರತಿಷ್ಠಾನದ ವತಿಯಿಂದ ದ್ವಾರಕೋತ್ಸವ-2024 ಎಂಬ ವಿಶಿಷ್ಟ ಕಾರ್ಯಕ್ರಮ ಫೆ.18ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶ್ರೀಪತಿ ಕಲ್ಲೂರಾಯ ಉದ್ಘಾಟಿಸಲಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮನಮೋಹನ ಎಂ. ಗ್ರಂಥಾಲಯ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಮತ್ತು ಯಕ್ಷಗಾನ ಪ್ರಸಾದನ ಕಲಾವಿದ ಕೆ. ವೆಂಕಟೇಶ ಮಯ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಬೆಳ್ಳಾರೆ ಮಂಜುನಾಥ ಭಟ್ಟ ಮತ್ತು ಗಣರಾಜ ಕುಂಬ್ಳೆ ಅವರು ಬರೆದ ಕೃತಿಗಳನ್ನು ಯಕ್ಷಗಾನ ಕಲಾ ಪೋಷಕರಾದ ಕೆ.ಪಿ. ರಾಜಗೋಪಾಲ್ ಬಿಡುಗಡೆ ಮಾಡಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಕೀ ಬೋರ್ಡ್ ವಾದನ, ಅಪರಾಹ್ನ ನಂದಗೋಕುಲದ ಕಿರಿಯ ಕಲಾವಿದರಿಂದ ಯಕ್ಷಗಾನ ವೈಭವ ನಡೆಯಲಿದೆ. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6.30ರಿಂದ “ಪಿಬರೇ ರಾಮರಸಂ’ ಎಂಬ ಹೆಸರಿನ ಶ್ರೀರಾಮಾವತಾರ ರೂಪಕ ನಡೆಯಲಿದೆ ಎಂದು ವಿವರಿಸಿದರು.
ದ್ವಾರಕಾ ಪ್ರತಿಷ್ಠಾನದ ವತಿಯಿಂದ ನಾನಾ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ರಾಮಾಯಣ ಪರೀಕ್ಷೆ ಆಯೋಜನೆ, ವಟುಗಳಿಗೆ ವೇದ ಪಾಠ ಶಿಬಿರ, ಬಡವರಿಗೆ ಮನೆ ನಿರ್ಮಾಣ, ರಸ್ತೆ ನಿರ್ಮಾಣ, ಯಕ್ಷಗಾನ ತರಬೇತಿ, ಪುಸ್ತಕ ಪ್ರಕಾಶನ, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಳಗಳನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಈ ಎಲ್ಲ ಕಾರ್ಯಕ್ರಮಗಳ ಸಾಲಿನಲ್ಲಿ ದ್ವಾರಕೋತ್ಸವ ಕೂಡ ಒಂದು ಎಂದವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕರಾದ ಅಮೃತಕೃಷ್ಣ ಎನ್. ಮತ್ತು ಎಚ್. ಆರ್. ಮ್ಯಾನೇಜರ್ ದುರ್ಗಾ ಗಣೇಶ್ ಉಪಸ್ಥಿತರಿದ್ದರು.