ನಾಳೆ ಪುತ್ತೂರಿಗರ ದಶಕದ ಬೇಡಿಕೆಯಾದ ರೈಲ್ವೆ ಅಂಡರ್‌ಪಾಸ್ ಲೋಕಾರ್ಪಣೆ.

ಪುತ್ತೂರು: ಮಾ. 26 : ಪುತ್ತೂರಿನ ಜನರ ಬಹು ವರ್ಷದ ಕಾಲದ ಬೇಡಿಕೆಯಾದ ಎಪಿಎಂಸಿ ರಸ್ತೆಯಲ್ಲಿ 14 ಕೋಟಿ ವೆಚ್ಚದಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣಗೊಂಡಿದೆ. ಇದರ ಲೋಕಾರ್ಪಣಾ ಕಾರ್ಯಕ್ರಮವು ಮಾರ್ಚ್ 26ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.
ಶಾಸಕ ಸಂಜೀವ ಮಠಂದೂರು, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್. ಅಂಗಾರ, ರೈಲ್ವೆ ಮತ್ತು ಎಪಿಎಂಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
4 ತಿಂಗಳ ಹಿಂದೆಯಷ್ಟೇ ಕಾಮಗಾರಿ ಆರಂಭಗೊಂಡಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತ್ವರಿತಗತಿಯಲ್ಲಿ ಅಂಡರ್‌ಪಾಸ್ ನಿರ್ಮಾಣಗೊಂಡಿದೆ. ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.
ಈ ಹಿಂದೆ ಪುತ್ತೂರು ನಗರದಿಂದ ಎಪಿಎಂಸಿ ರಸ್ತೆಯ ಮೂಲಕ ಹೋಗುವ ವಾಹನಗಳು ರೈಲ್ವೆ ಹಳಿಯವರೆಗೆ ಬಂದು ಅಲ್ಲಿಂದ ಹಳಿ ದಾಟಿ ಮುಂದೆ ಸಾಗಬೇಕಿತ್ತು. ಈ ವೇಳೆ ಹಳಿಗಳಲ್ಲಿ ರೈಲು ಸಂಚರಿಸುತ್ತಿದ್ದರೇ ಅಥಾವ ರೈಲು ಬರುವ ಸಂದರ್ಭ ಗೇಟು ಬಂದ್ ಮಾಡಿ ಸಂಪರ್ಕ ರಸ್ತೆಯನ್ನು ಮುಚ್ಚಲಾಗುತಿತ್ತು. ದಟ್ಟ ವಾಹನ ಸಂಚಾರವಿದ್ದ ರಸ್ತೆಯಲ್ಲಿ ಆಳವಡಿಸಲಾಗಿದ್ದ ಈ ವ್ಯವಸ್ಥೆಯಿಂದ ವಾಹನ ಚಾಲಕರಿಗೆ ಬಹಳಷ್ಟು ಸಮಸ್ಯೆಗಳಾಗಿತ್ತು. ಹೀಗಾಗಿ ಇಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು.
ಅಂಡರ್ ಪಾಸ್ ಲೋಕಾರ್ಪಣೆಯ ಬಳಿಕ ಈ ಪದ್ಧತಿಗೆ ತಿಲಾಂಜಲಿ ನೀಡಲಾಗುತ್ತಿದ್ದು ಹೊಸ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರಿಸಲು ಅವಕಾಶ ಕಲ್ಪಿಸಲಾಗುತ್ತದೆ. ರೈಲು ಗೇಟುಗಳ ಪಕ್ಕದಲ್ಲಿ ತಿರುವು ರಸ್ತೆ ನಿರ್ಮಿಸಿದ್ದು ಅದರಲ್ಲಿ ಸುಮಾರು ೫೦೦ ಮೀಟರ್‌ನಷ್ಟು ದೂರ ಅಂಡರ್‌ಪಾಸ್ ಮೂಲಕ ಸಾಗಿ ಮುಖ್ಯ ರಸ್ತೆಯನ್ನು ಸೇರುವಂತೆ ಹೊಸ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ.
ಎಪಿಎಂಸಿ ರಸ್ತೆಯ ನೂತನ ಅಂಡರ್‌ಪಾಸ್‌ನ ಎರಡೂ ಪಾರ್ಶ್ವಗಳಿಗೆ ವಿಶಾಲ ರಸ್ತೆ ನಿರ್ಮಿಸಲಾಗಿದೆ. ಪುತ್ತೂರು ಜಿಲ್ಲಾ ಕೇಂದ್ರವಾದರೂ ಆ ಪರಿಸ್ಥಿತಿಗೂ ಈ ರಸ್ತೆ ಸಾಕಾಗುತ್ತದೆ. ಅಂಡರ್‌ಪಾಸ್ ಕೆಳಗೆ ಒಂದು ಮೂಲೆಯಲ್ಲಿ ಒಂದಷ್ಟು ಜಾಗ ಖಾಸಗಿಯವರಿಂದ ಸಿಕ್ಕಿದಲ್ಲಿ ಅಲ್ಲಿ ಇನ್ನಷ್ಟು ಅನುಕೂಲವಾಗಲಿದೆ. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಬಗ್ಗೆ ನಗರಸಭೆ, ಸಹಾಯಕ ಆಯುಕ್ತರ ಕಚೇರಿ ಮಟ್ಟದಲ್ಲಿ ಚಿಂತನೆಗಳು ನಡೆದಿವೆ ಎಂದು ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಶಾಸಕ ಮಠಂದೂರು ಹೇಳಿದ್ದಾರೆ.
