ಪುತ್ತೂರು: ಅಪರೂಪದ ಫಾರೆಸ್ಟಿನ್ ಕ್ಯಾಟ್ ಸ್ನೇಕ್ ಪತ್ತೆ

ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬವರ ಮನೆಯಲ್ಲಿ ಫಾರೆಸ್ಟಿನ್ ಕ್ಯಾಟ್ ಸ್ನೇಕ್ ಪತ್ತೆಯಾಗಿದೆ. ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರು ಹಾವನ್ನು ರಕ್ಷಿಸಿ ಮತ್ತೆ ಅದರ ವಾಸಸ್ಥಾನವಾದ ದಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.

ಫಾರೆಸ್ಟಿನ್ ಕ್ಯಾಟ್ ಸ್ನೇಕ್ ಎಂದು ಕರೆಯಲಾಗುವ ಈ ಹಾವನ್ನು ನೋಡಿದ ಉರಗತಜ್ಞ ತೇಜಸ್ ಪುತ್ತೂರಿನಲ್ಲಿ ಈ ರೀತಿಯ ಹಾವು ಪತ್ತೆಯಾಗಿರುವುದೇ ಅಪರೂಪ ಎಂದಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಾವು ಹಿಡಿದು ಅವುಗಳ ರಕ್ಷಣೆ ಮಾಡುತ್ತಿರುವ ತೇಜಸ್ ಕಳೆದ ಹಲವು ವರ್ಷಗಳಿಂದ ಹಲವು ರೀತಿಯ, ಹಲವು ಪ್ರಕಾರದ ಹಾವುಗಳನ್ನು ರಕ್ಷಣೆ ಮಾಡಿದ್ದು, ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಹಾವನ್ನು ರಕ್ಷಿಸಿದ್ದಾರೆ.

ಹೆಚ್ಚಾಗಿ ಪಶ್ಚಿಮಘಟ್ಟದಂತಹ ದಟ್ಟ ಅರಣ್ಯಗಳ ಮಧ್ಯೆಯೂ ಅಪರೂಪವಾಗಿ ಕಾಣಸಿಗುವ ಬೆಕ್ಕು ಕಣ್ಣಿನ ಈ ಹಾವಿನ ಕಣ್ಣಿನಿಂದಲೇ ಈ ಹಾವಿಗೆ ಈ ಹೆಸರು ಬಂದಿದೆ. ಬೆಕ್ಕಿನ ಕಣ್ಞಿನಂತೆ ಬಿಳಿ ಕಣ್ಣುಗಳನ್ನು ಹೊಂದಿರುವ ಈ ಹಾವು ರಾತ್ರಿ ವೇಳೆಯಲ್ಲೇ ಸಂಚರಿಸುತ್ತದೆ.

ರಾತ್ರಿಯಲ್ಲಿ ಬೆಕ್ಕಿನ ಕಣ್ಣುಗಳಂತೆಯೇ ಹೊಳೆಯುವ ಈ ಹಾವಿನ ಕಣ್ಣುಗಳು ಅತ್ಯಂತ ಆಕರ್ಷಕವೂ ಆಗಿದೆ. ರಾತ್ರಿ ವೇಳೆಯಲ್ಲೇ ಬೇಟೆಗಿಳಿಯುವ ಈ ಹಾವು ಹಕ್ಕಿಗಳ ಮೊಟ್ಟೆ, ಸಣ್ಣ ಗಾತ್ರದ ಹಕ್ಕಿ, ಓತಿಕ್ಯಾತ ಸೇರಿದಂತೆ ಹಲವು ಸಣ್ಣ ಗಾತ್ರದ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುತ್ತದೆ. ವಿಷಕಾರಿಯಲ್ಲದ ಈ ಹಾವು ತನ್ನ ರಕ್ಷಣೆಗಾಗಿ ಕಚ್ಚುತ್ತದೆ. ಆದರೆ ಈ ಹಾವು ಕಚ್ಚಿದಲ್ಲಿ ಯಾವುದೇ ತೊಂದರೆಯೂ ಇಲ್ಲ ಎನ್ನುತ್ತಾರೆ ಉರಗತಜ್ಞ ತೇಜಸ್.

ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಮನೆಯ ಟೇಬಲ್ ಮೇಲೆ ಹಳದಿ ಬಣ್ಣದ ವಸ್ತು ಬಿದ್ದಿರುವುದನ್ನು ಗಮನಿಸಿದ್ದಾರೆ. ಹತ್ತಿರಕ್ಕೆ ಹೋಗಿ ಪರಿಶೀಲಿಸಿ ಸಂದರ್ಭದಲ್ಲಿ ಟೇಬಲ್ ಮೇಲೆ ಆರಾಮವಾಗಿ ಮಲಗಿರುವುದು ಹಳದಿ ಬಣ್ಣದ ಹಾವೆಂದು ಅವರ ಗಮನಕ್ಕೆ ಬಂದಿದೆ. ಕೂಡಲೇ ಉರಗತಜ್ಞ ತೇಜಸ್ ಗೆ ಈ ಬಗ್ಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸವನ್ನು ಉರಗತಜ್ಞ ತೇಜಸ್ ಮಾಡಿದ್ದಾರೆ.

Related Posts

Leave a Reply

Your email address will not be published.