ಮಂಗಳೂರು: ಮನಪಾ ಮಾಜಿ ಮೇಯರ್ ರಜನಿ ದುಗ್ಗಣ್ಣ ನಿಧನ
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಬಿಜೆಪಿ ನಾಯಕಿ ರಜನಿ ದುಗ್ಗಣ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮಂಗಳೂರು ಪಾಲಿಕೆಯ 8ನೇ ಹೊಸಬೆಟ್ಟು ವಾರ್ಡ್ ಹಾಗೂ ಮುಂಚೂರಿನ 2ನೇ ವಾರ್ಡ್‌ನ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದರು. 2012ರಲ್ಲಿ ಮಂಗಳೂರು ಪಾಲಿಕೆಯ ಮೇಯರ್ ಆಗಿ ಮಂಗಳೂರು ನಗರದ ಅಭಿವೃದ್ಧಿಗೆ ಶ್ರಮಿಸಿದ್ದರು. ಇವರಿಗೆ ಓರ್ವ ಪುತ್ರ ಮೂವರು ಪುತ್ರಿಯರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ರಜನಿ ದುಗ್ಗಣ್ಣ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ 5 ಗಂಟೆಗೆ ಮುಂಚೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.