ಸಂವಹನದ ಕೊರತೆಯೇ ಸಮಸ್ಯೆಗೆ ಮೂಲ ಕಾರಣ – ಸ್ವಾತಿ ಬಿ.

ಉಜಿರೆ, ಸೆ. 22: “ನಾವು ವಿಶೇಷವಾಗಿ ಗುರುತಿಸಲ್ಪಡಬೇಕೆಂದರೆ ನಮ್ಮಲ್ಲಿ ಕೌಶಲ್ಯಗಳಿರಬೇಕು. ಸಂವಹನ ಕೌಶಲ್ಯ ಪ್ರಸ್ತುತ ಬಹಳ ಪ್ರಮುಖ ಅಂಶ. ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಲ್ಲಿ ಶೇ.70 ರಷ್ಟು ಈ ಸಂವಹನ ಕೊರತೆಯಿಂದಲೇ ಬರುತ್ತದೆ” ಎಂದು ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ( MSW ) ವಿಭಾಗದ ಉಪನ್ಯಾಸಕಿ ಶ್ರೀಮತಿ ಸ್ವಾತಿ ಬಿ ಹೇಳಿದರು.

ಅವರು ಉಜಿರೆ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಶುಕ್ರವಾರ ಬೆಳಗ್ಗೆ ಏರ್ಪಡಿಸಿದ್ದ ‘ಪರಿಣಾಮಕಾರಿ ಸಂವಹನದ ಮೂಲಭೂತ ಅಂಶಗಳು’ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಈ ವೇಳೆ, “ಆಲಿಸುವುದು, ಅರ್ಥೈಸಿಕೊಳ್ಳುವುದು ಹಾಗೂ ಪ್ರತಿಕ್ರಿಯೆ ನೀಡುವುದು ಇವು ಮೂರು ಸಂವಹನದ ಮುಖ್ಯ ಅಂಶಗಳು. ಮೊದಲೇ ಗ್ರಹಿಸಿರುವ ವಿಚಾರಗಳು, ಬೇರೆ-ಬೇರೆ ರೀತಿ ಅರ್ಥೈಸಿಕೊಳ್ಳುವ ಮನಸ್ಥಿತಿ ಇವೆಲ್ಲವೂ ಪ್ರಸ್ತುತ ಆಡಿರುವ ಮಾತಿನ ಅರ್ಥವನ್ನು ಕೆಡಿಸಬಹುದು. ಅತ್ಯುತ್ತಮ ಸಂವಹನೆಗಿಂತ ಪರಿಣಾಮಕಾರಿ ಸಂವಹನೆಯು ಅಗತ್ಯ. ಇಲ್ಲಿ ನಾವು ಅತ್ಯುತ್ತಮ ಸಂವಹನೆ ಮತ್ತು ಪರಿಣಾಮಕಾರಿ ಸಂವಹನ ನಡುವಿನ ವ್ಯತ್ಯಾಸವನ್ನು ಅರ್ಥೈಸಿಕೊಳ್ಳಬೇಕು” ಎಂದರು.

ಪದವಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕಿ ಹಾಗೂ ವಿಭಾಗದ ಉಪನ್ಯಾಸಕಿ ಡಾ. ಗೀತಾ ಎ.ಜೆ, ಉಪನ್ಯಾಸಕಿ ಸಂಹಿತಾ ಎಸ್ ಮೈಸೂರೆ ಹಾಗೂ ಅಂತಿಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಂಜುನಾಥ ಕಾರ್ಯಕ್ರಮ ನಿರೂಪಿಸಿ, ಗ್ಲೆನ್ ಡಿ. ಸೋಜಾ ಸ್ವಾಗತಿಸಿ, ಮೃದುಲಾ ವಂದಿಸಿದರು.

Related Posts

Leave a Reply

Your email address will not be published.