ಉಳ್ಳಾಲ: ಡ್ರೈನೇಜ್ ನೀರಿನಲ್ಲಿ ತೊಕ್ಕೊಟ್ಟು ರಿಕ್ಷಾ ಚಾಲಕರ ಬದುಕು- ಪ್ರತಿಭಟನೆಗೆ ನಿರ್ಧಾರ
ಉಳ್ಳಾಲ: ಉಳ್ಳಾಲ ತಾಲೂಕಿನಲ್ಲೇ ಅತಿ ಹೆಚ್ಚು ರಿಕ್ಷಾ ಚಾಲಕರಿರುವ ತೊಕ್ಕೊಟ್ಟು ರಿಕ್ಷಾ ಚಾಲಕರು ಕಳೆದ ಎರಡೂವರೆ ತಿಂಗಳಿನಿಂದ ಸಂಡಾಸು ನೀರಿನ ಮೇಲೆಯೇ ನಿಂತು ದುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಕಟ್ಟಡದ ಮಾಲೀಕರು ತ್ಯಾಜ್ಯ ನೀರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಸಮಸ್ಯೆ ನಿರ್ಮಾಣವಾಗಿದೆ.
ದಿನದಲ್ಲಿ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಲಕ್ಷದಷ್ಟು ಮಂದಿ ನಡೆದುಕೊಂಡು ಹೋಗುವ ರಸ್ತೆಯಲ್ಲೇ ತ್ಯಾಜ್ಯ ನೀರು ಹರಿದಾಡಿದರೂ ಸಂಬಂಧಿಸಿದ ಉಳ್ಳಾಲ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಅನ್ನುವ ಆರೋಪವನ್ನು ತೊಕ್ಕೊಟ್ಟು ರಿಕ್ಷಾ ಪಾರ್ಕಿನ ಚಾಲಕರು ಹಾಗೂ ಮಾಲೀಕರು ಮಾಡಿದ್ದಾರೆ.
ತೊಕ್ಕೊಟ್ಟುವಿನಲ್ಲಿರುವ ಭೂಮಿಕ ಕಾಂಪ್ಲೆಕ್ಸ್ ನಿಂದ ಬರುವ ತ್ಯಾಜ್ಯ ನೀರು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಬದಿಯಲ್ಲೇ ಹರಿದು ಹೋಗುತ್ತಿದೆ. ರಸ್ತೆಯುದ್ದಕ್ಕೂ 120 ರಷ್ಟು ರಿಕ್ಷಾ ಚಾಲಕರು ದುಡಿಯುತ್ತಿದ್ದು, ಅದೇ ಕೊಳಚೆ ನೀರಿನ ಮೇಲೆಯೇ ನಿಂತು ದಿನ ಕಳೆಯಬೇಕಾಗಿದೆ. ಈ ಬಗ್ಗೆ ಕಟ್ಟಡ ಮಾಲೀಕರು ಹಾಗೂ ಉಳ್ಳಾಲ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ, ಒಂದೂವರೆ ತಿಂಗಳಿನಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಡೆಂಗ್ಯು, ಮಲೇರಿಯದಂತಹ ಸೊಳ್ಳೆಯಿಂದ ಬರುವ ಕಾಯಿಲೆಗಳು ವ್ಯಾಪಕವಾಗಿರುವ ಹೊತ್ತಿನಲ್ಲಿ ಅಧಿಕ ಜನಸಂಚಾರ ಇರುವ ತೊಕ್ಕೊಟ್ಟು ಜಂಕ್ಷನ್ ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ. ರಿಕ್ಷಾ ಚಾಲಕರೆಲ್ಲರೂ ಆತಂಕದ ನಡುವೆ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಸಮಸ್ಯೆಗೆ ಕಾರಣರಾಗಿರುವ ಕಟ್ಟಡಮಾಲೀಕರ ವಿರುದ್ಧ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ, ಸಮರ್ಪಕವಾಗಿ ಚರಂಡಿ ನೀರು ಹರಿದುಹೋಗುವಂತೆ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.