ಪಟಾಕಿ ಟುಸ್ ಮಾಡುವ ಹೊತ್ತಲ್ಲಿ
ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಸುಡುಮದ್ದು ತಯಾರಿಕಾ ಘಟಕಗಳನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿ ಇಟ್ಟಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಕುಡ್ತ್ಯಾರುನಲ್ಲಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಸಾವು ನೋವು ಸಂಭವಿಸಿರುವುದು ಇದಕ್ಕೆ ಕಾರಣ. 2008ರ ಸ್ಫೋಟಕ ಕಾಯ್ದೆಯ ನಿಯಮಾವಳಿ ಪ್ರಕಾರ ಈ ತಾತ್ಕಾಲಿಕ ಸುಡುಮದ್ದು ತಯಾರಿಕೆ ನಿಲುಗಡೆಯ ಆದೇಶ ನೀಡಲಾಗಿದೆ. ಈಗ ಉತ್ಸವಗಳ ಕಾಲ. ಉತ್ಸವಗಳಲ್ಲಿ ಮುಸ್ಲಿಮರು ತಯಾರಿಸುವ ದುಡುಮ್ ಕದೋನಿ ಮತ್ತು ಬಂಗಾರದ ಕಿಡಿ ಉಗುಳುವ ದುರುಸುಗಳಿಗೆ ತುಂಬ ಮಹತ್ವವಿದೆ. ಹಾಗೆಯೇ ಮದುವೆಗೆ ಗರ್ನಾಲ್ ಹೊಡೆಯುವುದು ತುಳುನಾಡಿನ ಸಂಪ್ರದಾಯವಾಗಿ ಹೋಗಿದೆ.
ಒಂದು ಸ್ಫೋಟಕ ಎಂದರೆ ಗಟ್ಟಿ ಕಟ್ಟಿನ ಒಳಗೆ ಸಿಡಿಮದ್ದು ಪುಡಿ ಇದ್ದು, ಅದಕ್ಕೆ ಹೊರಗಿನಿಂದ ಬೆಂಕಿ ಸೋಕಿಸಲು ಬತ್ತಿ ಇರುತ್ತದೆ. ಬತ್ತಿಯ ಬೆಂಕಿ ಒಳಗೆ ಸೋಕುತ್ತಲೇ ಅದು ಸಿಡಿಯುತ್ತದೆ.
ಹತ್ತನೆಯ ಶತಮಾನದಲ್ಲಿ ಚೀನೀಯರು ಸುಡುಮದ್ದುಗಳನ್ನು ತಯಾರಿಸಲು ಆರಂಭಿಸಿದರು ಎಂಬುದು ಲೋಕ ಒಪ್ಪಿದ ವಿಷಯ. ಪೆÇಟಾಸಿಯಂ ನೈಟ್ರೇಟ್, ಗಂಧಕ ಮತ್ತು ಇದ್ದಿಲು ಪುಡಿ ಸೇರಿಸಿದರೆ ಸ್ಫೋಟಕ ಇಲ್ಲವೇ ಸುಡುಮದ್ದು ಸಿದ್ಧ. ಚೀನೀಯರು ಅವರ ಹೊಸ ವರುಷದ ದಿನ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಂಟೆಗಟ್ಟಲೆ ಸುಡುಮದ್ದು ಸುಡುತ್ತಿದ್ದರು ಎಂಬುದು ಜೆಸೂಯಿಟ್ ಪಾದ್ರಿ ಮಾಟಿಯೋ ಮೊದಲಾದವರ ದಾಖಲೆಗಳಿಂದ ತಿಳಿಯುತ್ತದೆ. ಅರಬ್ ವ್ಯಾಪಾರಿಗಳು ಚೀನಾದ ಸುಡುಮದ್ದುಗಳನ್ನು ಯೂರೋಪಿಗೆ ಮುಟ್ಟಿಸಿದರು. ಚೀನೀಯರು ಸಂತೋಷ ಸಂಭ್ರಮಕ್ಕೆ ಮಾತ್ರ ಬಳಸಿದ ಸುಡುಮದ್ದು ಯೂರೋಪಿನಲ್ಲಿ 14ನೇ ಶತಮಾನದಲ್ಲಿ ಯುದ್ಧದ ಅಸ್ತ್ರವಾಗಿ ಅಭಿವೃದ್ಧಿ ಪಡೆಯಿತು. ಸುಡುಮದ್ದಿನ ಶಕ್ತಿಯಿಂದ ಸೀಸದ ಗುಂಡು ಹಾರಿಸುವ ಬಂದೂಕು, ಕೋಟೆ ಸಿಡಿಸುವ ತೋಪುಗಳು ಇತ್ಯಾದಿ ತಯಾರಾದವು.
ಚೀನೀಯರು ಧಾರ್ಮಿಕ ಕಾರ್ಯಗಳಲ್ಲಿ ಸುಡುಮದ್ದು ಬಳಸುವಾಗ ದೊಡ್ಡ ಶಬ್ದದ ಕದೊನಿಗಳ ಮೂಲಕ ಮಂದಿರದ ಸುತ್ತ ಬಂದ ದುಷ್ಟ ಶಕ್ತಿಗಳನ್ನು ಓಡಿಸುತ್ತಿದ್ದರು ಎನ್ನುವುದು ಸಹ ಪಾದ್ರಿಗಳ ದಾಖಲೆ. ನಮ್ಮ ದೈವ ದೇವರುಗಳ ಉತ್ಸವಗಳಲ್ಲಿ ಕದೋನಿ ಸಿಡಿಸಲು ಇದು ಕೂಡ ಕಾರಣ ಇರಬಹುದು. ನಳಿಕೆಯಲ್ಲಿ ಸುಡುಮದ್ದು ಸುಟ್ಟಾಗ ಪೆÇಟಾಸಿಯಂ ಕ್ಲೋರೈಡ್ ನೂಕು ಶಕ್ತಿಯಾಗಿ ಬದಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಇದನ್ನು ಬಳಸಿದಾಗ ಕ್ಷಿಪಣಿ ಹಾರಿ ಸೇರುವೆಡೆ ಸೇರುತ್ತದೆ ಮತ್ತು ರಾಕೆಟ್ಟುಗಳು ಗಗನನೌಕೆಗಳನ್ನು ವ್ಯೋಮಕ್ಕೆ ಸೇರಿಸುತ್ತವೆ. ಅಂದರೆ ನಮ್ಮ ಗಗನಯಾತ್ರಿಗಳು ಸುಡುಮದ್ದಿನ ಮೇಲೆ ಚಂದ್ರ, ಮಂಗಳರಿಗೆ ಮುತ್ತಿಗೆ ಹಾಕುತ್ತಿರುವವರು. ಟಿಪ್ಪು ಸುಲ್ತಾನ್ ಕೂಡ ಇದೇ ತತ್ವದ ಮೇಲೆ ಮೊದಲ ರಾಕೆಟ್ ತಯಾರಿಸಿ ಬ್ರಿಟಿಷರ ಮೇಲೆ ಹೂಡಿದ್ದ. ಆದರೆ ಅವು ಆರಂಭಿಕ ಕಡಿಮೆ ಬಲದವುಗಳಾಗಿದ್ದವು. ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಟಿಪ್ಪುವಿನ ಬಹುತೇಕ ನೆಲದಡಿಯ ಸುಡುಗುಂಡು ತಯಾರಿಕೆಯ ಕೋಣೆಗಳು ಈಗಲೂ ಇವೆ. ಮಿಂಚುಪುಡಿ, ಕಾರ್ಡೈಟ್, ಕಪ್ಪು ಪುಡಿ ಅಷ್ಟೇ ಏಕೆ ಬೆಂಕಿ ಕಡ್ಡಿಯ ಮದ್ದು ಇವೆಲ್ಲವೂ ಸ್ಫೋಟಕಗಳೇ ಆಗಿವೆ. ಅವುಗಳ ಪ್ರಮಾಣದ ಮೇಲೆ ಅದರ ಶಕ್ತಿ ಇರುತ್ತದೆ.
ಬೆಂಕಿ ಕಡ್ಡಿ, ಪಟಾಕಿ ಎಂದ ಕೂಡಲೆ ನಮಗೆ ಶಿವಕಾಶಿ ನೆನಪಾಗದಿರಲು ಸಾಧ್ಯವಿಲ್ಲ. ಕಳೆದ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಶಿವಕಾಶಿ ಪಟಾಕಿ ಮಳಿಗೆಗೆ ಬೆಂಕಿ ಬಿದ್ದು ಅದೆಷ್ಟೋ ಸಾವು ನೋವು ನಷ್ಟ ಆಯಿತು. ಆ ಶಿವಕಾಶಿಯದು ಒಂದು ರೋಚಕ ಕತೆ. ಅಯ್ಯಾ ನಾಡಾರ್ ಎಂಬವರು ಆಗಿನ ಬ್ರಿಟಿಷರ ರಾಜಧಾನಿ ಕಲ್ಕತ್ತಾಕ್ಕೆ ಹೋಗಿ ಬೆಂಕಿ ಪೆಟ್ಟಿಗೆ ತಯಾರಿ ಕಲಿತುಕೊಂಡರು. 1903ರಲ್ಲಿ ತಮ್ಮೂರಿಗೆ ಹಿಂತಿರುಗಿ ಶಿವಕಾಶಿಯಲ್ಲಿ ಬೆಂಕಿ ಪೆಟ್ಟಿಗೆ ತಯಾರಿಸಿದರು. ಬೆಂಕಿ ಕಡ್ಡಿಯ ಮದ್ದು ಕೂಡ ಸೌಮ್ಯ ಸ್ಫೋಟಕ ಆಗಿರುವುದರಿಂದ ಪಟಾಕಿ ತಯಾರಿಸುವುದು ಹುಟ್ಟಿಕೊಂಡಿತು. ಅವಕ್ಕೆ ಬಣ್ಣದ ಆವರಣಕ್ಕಾಗಿ ಬಣ್ಣದ ಮುದ್ರಣ ಹುಟ್ಟಿಕೊಂಡಿತು. ಅತ್ಯಾಧುನಿಕ ಯಂತ್ರಗಳು ಬರುವುದಕ್ಕೆ ಮೊದಲು ಕ್ಯಾಲೆಂಡರ್ ಎಂದರೆ ಶಿವಕಾಶಿ, ಪಟಾಕಿ ಎಂದರೆ ಶಿವಕಾಶಿ, ಬೆಂಕಿಪೆÇಟ್ಟಣ ಎಂದರೆ ಶಿವಕಾಶಿ ಎಂದಿತ್ತು. ಅದು ಈಗ ತುಸು ಕುಸಿದಿದೆಯಾದರೂ ಶಿವಕಾಶಿಯ ಈ ಮೂರು ಈಗಲೂ ದೇಶ ಪ್ರಸಿದ್ಧ. ವಿದೇಶ ನೋಡುವವುಗಳೂ ಆಗಿವೆ.
ಚೀನೀಯರು ಸುಡುಮದ್ದು ತಯಾರಿಸಿದಾಗ ಅದು ಬಿಳಿ ಮತ್ತು ಬಂಗಾರದ ಬಣ್ಣ ತೋರಿಸುವವುಗಳು ಮಾತ್ರ ಆಗಿದ್ದವು. ಅವನ್ನು ಬಹು ಬಣ್ಣದ್ದಾಗಿ ಮಾಡಿದವರು ಇಟೆಲಿಯವರು. 17ನೇ ಶತಮಾನದಲ್ಲಿ ಈ ಬಹು ಬಣ್ಣದ ಸುಡುಮದ್ದು ಇಟೆಲಿಯ ಆಕಾಶದಲ್ಲಿ ಚಿತ್ತಾರ ಬಿಡಿಸತೊಡಗಿತು. ಬಹುಬೇಗನೆ ಜಾಗತಿಕ ಬಾನಂಗಳ ಬಣ್ಣದ ಬಾಣ ಬಿರುಸುಗಳ ಅಂಗಳವಾಯಿತು. ಲೋಹಗಳ ಮೂಲ ಧಾತುಗಳನ್ನು ಸೇರಿಸಿ ಈ ಬಣ್ಣದ ಲೋಕವನ್ನು ತೆರೆದಿಡಲಾಯಿತು. ಕಡು ಬಿಳಿಗೆ ಟೈಟಾನಿಯಂ ಮತ್ತು ಅಲ್ಯೂಮಿನಿಯಂ, ಸಹಜ ಬಿಳಿಗೆ ಟೈಟಾನಿಯಂ ಮೆಗ್ನೀಸಿಯಂ, ನೀಲಿಗೆ ತಾಮ್ರದ ಮೂಲ ಧಾತು, ಹಸಿರು ಉಕ್ಕಲು ಬೇರಿಯಂ ನೈಟ್ರೇಟ್, ಹಳದಿ ಹರಿಯಲು ಸೋಡಿಯಂ ಆಕ್ಸಲೇಟ್ ಇವೆಲ್ಲ ಸಿಡಿ ಸುಡುಮದ್ದಿನಲ್ಲಿ ಸೇರಿಸುವುದರಿಂದ ಬಣ್ಣದ ಲೋಕ ತೆರೆದುಕೊಳ್ಳುತ್ತದೆ.
ಆಗಸ ನೋಡುತ್ತ ಮೈ ಮರೆಯುವ ಕಾಲವದು. ನಕ್ಷತ್ರ ಕಡ್ಡಿ ಮೂಲಕ ಕಯ್ಯಲ್ಲೆ ಕಲರ್ ಕಲರ್ ಎನ್ನುವ ಕಾಲವಿದು.
ಈಗೆಲ್ಲ ಕಂಪ್ಯೂಟರ್ ಕಾಲ. ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ವಾಹಕವಾಗಿ ರಾಕೆಟ್ ಸ್ಫೋಟಿಸಲಾಗುವುದು. ಕಂಪ್ಯೂಟರಿನಲ್ಲಿ ಇದಕ್ಕೆ ಪೆÇ್ರೀಗ್ರಾಂ ಮಾಡಿ, ನಿಶ್ಚಿತ ಸಮಯ ನೀಡಿ ಕೆಳಗೆಣಿಸುತ್ತ ಖಚಿತವಾಗಿ ಅದನ್ನು ಸುಡುಮದ್ದು ಮೂಲಕ ಆಕಾಶಕ್ಕೆ ಓಡುಗುದ್ದು ಮಾಡಲಾಗುತ್ತದೆ. ಕಂಪ್ಯೂಟರ್ ಪೆÇ್ರೀಗ್ರಾಂ ಮೂಲಕ ನಿಶ್ಚಿತ ಸಮಯವಲ್ಲದೆ ನಿಶ್ಚಿತ ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಚಂದದಲ್ಲಿ ಕುಣಿಯುತ್ತ ಸಿಡಿಯುವ, ರಂಗೋಲಿ ಚೆಲ್ಲುವ, ಮೈಮರೆಸುವ ಸುಡುಮದ್ದು ಪ್ರದರ್ಶನಗಳು ಕೂಡ ಇಂದು ಸಹಜ ಎಂಬಂತೆ ಇವೆ. ಕಂಪ್ಯೂಟರಿನಲ್ಲಿ ವಿದ್ಯುನ್ಮಾನ ಸುಡುಮದ್ದು ಪ್ರದರ್ಶನ ರೂಪಿಸಿ ಅವುಗಳನ್ನು ಚಲನಚಿತ್ರಗಳಲ್ಲಿ ಬಳಸಿಕೊಳ್ಳುವುದು ಸಹ ಈಗ ಹೊಸತಲ್ಲ.
ಯೂರೋಪಿನಲ್ಲಿ ಯುದ್ಧದ ಅಸ್ತ್ರವಾಗಿ ಸುಡುಮದ್ದು ಬದಲಾಗುವಾಗ ಅದರ ತಯಾರಕರು ಗೆಲುವು ಮತ್ತು ಶಾಂತಿಯ ಕಿರು ಉತ್ಸವ ಬೇಕಿತ್ತು. ಗೆಲುವು ಬೇಕೆಂದರೆ ಯುದ್ಧ ನಡೆಯಬೇಕು. ಯುದ್ಧದಲ್ಲಿ ಸುಡುಮದ್ದು ಅಸ್ತ್ರ ಬಳಸಿದ ಮೇಲೆ ಅದರಿಂದ ಶಾಂತಿ ಮಂತ್ರ ಹೊರಡುವುದಿಲ್ಲ. ಪರಮಾಣು ಬಾಂಬ್ ಸಹಿತ ಎಲ್ಲವನ್ನೂ ಮಾನವರು ಶಾಂತಿಯ ಜಪದೊಡನೆ ತಯಾರಿಸಿ, ವಿನಾಶದ ಹಾದಿಯಲ್ಲಿ ಎಸೆದಿದ್ದಾರೆ. 18
84ರ ಸ್ಫೋಟಕ ಕಾಯ್ದೆಗೆ 2008ರಲ್ಲಿ ತಿದ್ದುಪಡಿ ತರಲಾಗಿದೆ. ಅದರ ಎಲ್‍ಇ
ಸುಡುಮದ್ದು ತಯಾರಿಕೆಗೆ ಪರವಾನಗಿ ನೀಡಲಾಗುತ್ತದೆ. ಬೆಂಕಿ ಅವಘಡ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸುವಂತೆ ಅದರಲ್ಲಿ ಸೂಚನೆ ಇರುತ್ತದೆ. ಆದರೆ ನಿಯಮ ಪಾಲನೆ ಆಗುವುದಿಲ್ಲ. ಪ್ರಾಣಗಳು ಉರುಳಿದಾಗ ನಿಯಮ ನೆನಪಾಗುತ್ತದೆ; ತಿಂಗಳ ಬಳಿಕ ಮರೆತು ಹೋಗುತ್ತದೆ.
ಸುಡುಮದ್ದುಗಳು ಮನೋಲ್ಲಾಸಕಾರಿ ಆಗಿರುವಂತೆ ಅಪಾಯಕಾರಿ ಸಹ ಆಗಿದೆ. ಅವು ವಾಯು ಮಾಲಿನ್ಯ ಉಂಟು ಮಾಡುತ್ತವೆ; ಶಬ್ದ ಮಾಲಿನ್ಯ ಉಂಟು ಮಾಡುತ್ತವೆ. ಅವಕ್ಕೆಲ್ಲ ನಿಯಂತ್ರಣ ನಿಯಮಾವಳಿ ಬಂದಿವೆ. ಹಸಿರು ಪಟಾಕಿ ಶಬ್ದ ಹುಟ್ಟಿದೆ. ಹಸಿರು ಪಟಾಕಿ ನಿಜವಾಗಿ ಹುಟ್ಟಿದ ಸೂಚನೆ ಇಲ್ಲ.
✍ ಬರಹ: ಪೇರೂರು ಜಾರು