ಅವಳಿ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸದ ಬಿಜೆಪಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ : ರಕ್ಷಾ ರಾಮಯ್ಯ
ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಅವಳಿ ನಗರ ಮೂಲಭೂತ ಸೌಕರ್ಯದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಪರಮ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶವಾಗಿದ್ದು, ಆಡಳಿತ ನಡೆಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖರು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಆರೋಪಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ದ್ರುವನಾರಾಯಣ್ ಅವರ ಜತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್, ಕಳೆದ ಏಳು ವರ್ಷಗಳಿಂದ ಕೇಂದ್ರ ಸಚಿವರಾಗಿರುವ ಪ್ರಹಲ್ಲಾದ್ ಜೋಷಿ ಅವರಿಂದ ಈ ಭಾಗಕ್ಕೆ ಯಾವುದೇ ಅನುಕೂಲವಾಗಿಲ್ಲ ಎಂದರು.
ಜನತೆ ಈ ಬಾರಿ ಬಿಜೆಪಿ ದುರಾಡಳಿತ ಮತ್ತು ನಿರ್ಲಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ಹುಬ್ಬಳ್ಳಿ – ಧಾರವಾಡದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅತ್ಯಂತ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಬೇಕಾಗಿದ್ದ ಅವಳಿ ನಗರದಲ್ಲಿ ಸೂಕ್ತ ರೀತಿಯಲ್ಲಿ ಕುಡಿಯುವ ನೀರು ದೊರೆಯುತ್ತಿಲ್ಲ. ದಿನದ 24 ಗಂಟೆ ನೀರು ಪೂರೈಸುವ ಯೋಜನೆ ಹಳ್ಳ ಹಿಡಿದಿದ್ದು, ಇದು ಘೋಷಣೆಗೆ ಮಾತ್ರ ಸೀಮಿತವಾಗಿದೆ. ನೀರು ಪೂರೈಸಲು ಸಾಧ್ಯವಾಗದ ಬಿಜೆಪಿ ನಾಯಕರಿಗೆ ಮತದಾರರು ಈ ಬಾರಿ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸೂಕ್ತ ರೀತಿಯಲ್ಲಿ ರಸ್ತೆ ಸೌಲಭ್ಯವಿಲ್ಲ, ಒಳಚರಂಡಿ ವ್ಯವಸ್ಥೆ ಮರಿಚಿಕೆಯಾಗಿದೆ. ಚುನಾವಣೆ ಹತ್ತಿರವಾಗುತ್ತಿರುವಾಗ ಸ್ಮಾರ್ಟ್ ಸಿಟಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಇಲ್ಲಿನ ಬೇಲೂರು, ಗೋಕುಲ ಕೈಗಾರಿಕಾ ಪ್ರದೇಶ ನಿಷ್ಕ್ರೀಯವಾಗಿದೆ. ಉದ್ಯೋಗ ಸೃಷ್ಟಿ ಮಾಡುವ ದೂರಗಾಮಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿಲ್ಲ ಎಂದು ರಕ್ಷಾ ರಾಮಯ್ಯ ಆಪಾದಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪಿ ಡಿ ದೇಸಾಯಿ ಕೆಪಿವೈಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ದೇಸಾಯಿ, ಕಾರ್ಯದರ್ಶಿ ಪ್ರವೀಣ್ ಚಲವಾದಿ, ಹುಬ್ಬಳ್ಳಿ ಧಾರವಾಡ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಶ್ರೇಯಾ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಪ್ರಜ್ವಲ್ ಗೌಡರ್ ಉಪಸ್ಥಿತರಿದ್ದರು.