ಭಾರತದ ಮೀನು ಮಾಂಸ ಪ್ರಸಾದದ ಆಲಯಗಳು

ಇತ್ತೀಚೆಗೆ ದೇಶದ ನಿಜ ಪರಂಪರೆ ಮತ್ತು ಭಾರತೀಯರ ದಿಟ ಸಂಸ್ಕøತಿಯ ಬಗೆಗೆ ಅರಿವಿಲ್ಲದವರು ಮೀನು ಮಾಂಸದ ಬಗೆಗೆ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯವರೇ ಮಾಂಸ ತಿಂದು ಹಬ್ಬ ಮಾಡಿದರು; ಮೀನು ತಿಂದು ಉತ್ಸವ ನೋಡಿದರು ಎಂದಿತ್ಯಾದಿಯಾಗಿ ಟೀಕಿಸಿದ್ದಾರೆ. ಇಡೀ ಮಾನವ ಕುಲವೇ ಆದಿ ಯುಗದಲ್ಲಿ ಎರಡೇ ಕೆಲಸ ಮಾಡುತ್ತಿದ್ದುದು. ಒಂದು ಬೇಟೆಯಾಡುವುದು, ಎರಡು ನಿಸರ್ಗದಲ್ಲಿ ಸಿಗುವುದನ್ನು ಸಂಗ್ರಹಿಸುವುದು. ಬೇಟೆಯಾಡುವುದು ಏಕೆ ಎಂದು ವಿವರಿಸಬೇಕಾದ ಅಗತ್ಯವಿಲ್ಲ. ಹನ್ನೊಂದು ಸಾವಿರ ವರುಷದ ಹಿಂದಿನವರೆಗೂ ಮನುಷ್ಯ ಬದುಕಿದ್ದು ಹೀಗೆಯೇ.


ಈಗಲೂ ಕೆಲವು ಕಡೆ ಇದೇ ಆದಿ ಸಂಸ್ಕøತಿಯ ಜನರು ಅಮೆಜಾನ್, ಕಾಂಗೋ, ಈಶಾನ್ಯ ಏಶಿಯಾ, ಭಾರತದ ಅಂಡಮಾನ್ ನಿಕೋಬಾರ್ ಮತ್ತು ಕೆಲವು ಅರಣ್ಯ ಪ್ರದೇಶಗಳಲ್ಲಿ ಕಂಡು ಬರುತ್ತಾರೆ. ಕರ್ನಾಟಕದಲ್ಲಿ ಸೋಲಿಗರು, ಹಕ್ಕಿ ಪಿಕ್ಕಿ ಮೊದಲಾದವರು ಈಗಷ್ಟೆ ತಮ್ಮ ಈ ತಮ್ಮ ಮೂಲ ಸಂಸ್ಕøತಿಗೆ ನಾಗರಿಕ ಸಮಾಜದವರಿಂದಾಗಿ ಎರವಾಗುತ್ತಿದ್ದಾರೆ. ನಮ್ಮ ವೇದಗಳು, ಪುರಾಣಗಳು ಯಾವುವೂ ಮಾಂಸ ತಿನ್ನಬೇಡಿ ಎಂದು ಹೇಳಿಲ್ಲ. ಆದರೆ ಕೆಲವು ತೋಳಗಳು ಹೇಳುತ್ತವೆ; ಹಲವು ಕುರಿಗಳು ಕೇಳುತ್ತವೆ.


ಮಲ್ಪೆ ಸುತ್ತಿನ ಕತೆಯನ್ನು ಮುಕ್ಕಾಲು ಶತಮಾನದಿಂದ ಕಂಡುಂಡವರ ಅನುಭವ ಹೀಗಿದೆ. ಮೀನುಗಾರರು ಎಷ್ಟು ಶ್ರಮ ಪಟ್ಟರೂ ಹೊಟ್ಟೆ ಬಟ್ಟೆಗೆ ಕಷ್ಟವಿತ್ತು. ಮೀನುಗಾರ ಮಹಿಳೆಯರು ದಿನಕ್ಕೆ 20 ಕಿಲೋಮೀಟರಿಗೂ ಹೆಚ್ಚು ದೂರ ಮೀನು ಹೊತ್ತು ನಡೆದದ್ದೂ ಇದೆ. 70ರ ದಶಕದ ಬಳಿಕ ಆದ ಮೊದಲ ಬದಲಾವಣೆ ಮುಸ್ಲಿಮರು ಮೀನುಗಳನ್ನು ವಾಹನಗಳ ಮೂಲಕ ದೂರದೂರಿಗೆ ಸಾಗಿಸ ತೊಡಗಿದ್ದರಿಂದ ಮೀನಿಗೆ ಬೇಡಿಕೆ ಹೆಚ್ಚಿತು. ಇದೇ ದಶಕದಲ್ಲಿ ಕೊಲ್ಲಿ ದೇಶಗಳಿಗೆ ಹೋದ ಕ್ರಿಶ್ಚಿಯನರು 80ರ ದಶಕದಲ್ಲಿ ಹಿಂತಿರುಗಿ ಬಂದು ಯಾವ ಬೆಲೆಗಾದರೂ ಮೀನು ಕೊಂಡುಕೊಳ್ಳತೊಡಗಿದರು. ಇದರಿಂದ ಮೀನಿನ ಬೆಲೆ ಏರತೊಡಗಿತು. ಮೀನುಗಾರ ಕುಟುಂಬಗಳು ಭದ್ರವಾಗತೊಡಗಿದವು. ಕಾಂಗ್ರೆಸ್ ಸರಕಾರದ ಸವಲತ್ತುಗಳೂ ಸೇರಿ ಗುಡಿಸಲುಗಳಿಲ್ಲದ ಮೀನುಗಾರ ಲೋಕ ಸೃಷ್ಟಿಯಾಯಿತು.


ಆದರೆ ಹಣ ಆದ ಮೇಲೆ ಅವರ ಉಡುಪಿ ಭಕ್ತಿ ಹೆಚ್ಚಾಗಿದೆ ಎಂಬುದು ವಿಪರ್ಯಾಸವಾದರೂ ಸತ್ಯ. ತುಳುನಾಡಿನ ಎಲ್ಲ ಹಬ್ಬಗಳಲ್ಲೂ ಮೀನು, ಕೋರಿಯ ಮಿಸೆಲ್ ಇಡುವ ಪದ್ಧತಿ ಇದೆ. ಈ ಮೀನಿಗಾಗಿ ದೀಪೊಲಿಯಲ್ಲಿ ಇತರರ ಸತ್ತವರ ಹಬ್ಬ ಆದ ಮರುದಿನ ಮೀನುಗಾರರ ಸತ್ತವರ ಹಬ್ಬ ನಡೆಯುತ್ತದೆ. ಮಿಸೆಲ್ ಕುಟುಂಬದ ಹಿರಿಯರಿಗಿರಬಹುದು, ದೈವಗಳಿಗಿರಬಹುದು. ನಮ್ಮ ದೈವಗಳೆಲ್ಲ ಮೀನು ಮಾಂಸ ಪ್ರಿಯರು ಮತ್ತು ನಮ್ಮ ಜೊತೆಗೆ ನಮ್ಮ ತುಳುವಿನಲ್ಲೇ ಮಾತನಾಡುವವರಾಗಿದ್ದಾರೆ. ಆದರೆ ವೈದಿಕ ಮೂಲ ಗ್ರಂಥಗಳಲ್ಲಿ ಎಲ್ಲೂ ಹೇಳದ ಸಸ್ಯಾಹಾರ ಎಂಬ ಪರಂಪರೆಯನ್ನು ಕೆಲವರು ಸಾರ್ವಜನಿಕರ ಮೇಲೆ ಹೇರುವಲ್ಲಿ ಯಶಸ್ವಿಯಾಗಿದ್ದಾರೆ.


ಇದು ಸ್ವಂತಿಕೆ ಪತನದ ಹಾದಿ. ಕ್ರಿಸ್ತ ಶಕದ ಹಿಂಚುಮುಂಚಿನಲ್ಲಿ ಜೈನ ಧರ್ಮ ಸಸ್ಯಾಹಾರಕ್ಕೆ ಒತ್ತು ಕೊಟ್ಟಿತು. ಅದು ರಾಜ ಧರ್ಮವಾಗಿತ್ತು. ಬೌದ್ಧ ಧರ್ಮದಲ್ಲಿ ಮಾಂಸಾಹಾರ ನಿಷಿದ್ಧವಲ್ಲ. ಆದರೆ ಅಹಿಂಸೆಗೆ ಒತ್ತು ಕೊಟ್ಟದ್ದರಿಂದ ಸಸ್ಯಾಹಾರ ಮೇಲೆದ್ದಿತು. ಮುಂದೆ ಬಂದ ಹಿಂದೂ ರಾಜಸತ್ತೆಗಳು ಇದನ್ನು ಒಂದು ಮಟ್ಟಿಗೆ ಅನುಸರಿಸಿದವು. ರಾಜರ ಮಾಲೀಶ್ ಮಾಡಿದ ಜನರು ಜನಸಾಮಾನ್ಯರ ಆಹಾರಕ್ಕೆ ಬೆಲೆ ಕಡಿಮೆ ಆಗುವಂತೆ ನೋಡಿಕೊಂಡರು. ಅದು ಈ ದೇಶದ ಮೂಲ ಮಂದಿಯನ್ನು ಕೆಲ ಮಟ್ಟಿಗೆ ಕೀಳರಿಮೆಯತ್ತ ನಡೆಸಿದೆ ಎನ್ನುವುದೂ ಸುಳ್ಳಲ್ಲ.


ಕೇರಳದ ಪಯ್ಯನೂರು ಬಳಿಯ ತಿರುವರ್‍ಕಾಟ್ಟು ಭಗವತಿ ದೇವಾಲಯವು ಬಂಗಾಳದಿಂದ ಎಂದೋ ಬಂದ ತಾಂತ್ರಿಕರ ದೇವಾಲಯವಾಗಿದೆ. ಇಲ್ಲಿ ಕಾಳಿಯೇ ನೆಲದ ಬನಿಗೆ ತಕ್ಕಂತೆ ಭಗವತಿ ಆಗಿದ್ದಾಳೆ. ತಾಂತ್ರಿಕ ಪರಂಪರೆಯ ಬಂಗಾಳಿ ಅರ್ಚಕರು ಕೋಳಿ ಖಾದ್ಯದ ಪ್ರಸಾದ ನೀಡುತ್ತಾರೆ. ಇಲ್ಲಿ ಇರುಳು ತಾಂತ್ರಿಕ ಪೂಜೆ ನಡೆಯುವುದರಿಂದ ಕೆಲವು ರಾಜಕಾರಣಿಗಳು ರಾತ್ರಿಯ ಪೂಜೆಗೆ ಬರುತ್ತಾರೆ. ನಮ್ಮ ಸಸ್ಯಾಹಾರಿ ಯಡಿಯೂರಪ್ಪನವರೂ ಹೋಗಿದ್ದರು ಎನ್ನಲಾಗಿದೆ. ಇಲ್ಲಿಯೇ ಕಣ್ಣಾನೂರು ಬಳಿ ಇರುವ ಮುತ್ತಪ್ಪ ಆಲಯದಲ್ಲಿ ಒಣ ಮೀನು ಸೇರಿಸಿದ ಕಡಲೆ ಉಸುಲಿ ಪ್ರಸಾದ ನೀಡುತ್ತಾರೆ; ಅಲ್ಲದೆ ಕಳ್ಳು ಪ್ರಸಾದವೂ ಉಂಟು. ಕಳ್ಳು ಬಂಗುಡೆ ಪ್ರಸಾದ ಎಂದಾಗ ನಮ್ಮ ಕೊರಗಜ್ಜ ನೆನಪಾಗಿಯೇ ಆಗುತ್ತಾರೆ.
ಹಿಂದೂ ಶಬ್ದದ ಆಚೀಚೆ ಏನೂ ಗೊತ್ತಿಲ್ಲದವರಿಗೆ ಇದೆಲ್ಲ ಹೇಗೆ ಗೊತ್ತಾಗಬೇಕು. ಭಾರತದಲ್ಲಿ ಮೀನು ಮಾಂಸ ಪ್ರಸಾದದ ಸಾವಿರಾರು ದೇವಾಲಯಗಳಿರುವುದು ತಿಳಿದು ಬಂದಿದೆ. ಅವುಗಳಲ್ಲಿ ಮಾಂಸಾಹಾರದ ಪ್ರಸಾದ ನೀಡುವ ಪ್ರಮುಖ ದೇವಾಲಯಗಳು ಮುಂದಿನಂತಿವೆ. ಹಿಮಾಚಲ ಪ್ರದೇಶದ ಮಂಡಿ ಬಳಿಯ ಕಾಮಾಕ್ಷ ದೇವಿ ದೇವಸ್ಥಾನ. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಕಾಲ ಭೈರವ ದೇವಾಲಯದಲ್ಲಿ ಮದ್ಯ ಮಾಂಸವೇ ದೇವರ ನೈವೇದ್ಯವಾಗಿದೆ. ಭಕ್ತರಿಗೆ ಆ ಪ್ರಸಾದವೂ ಸಿಗುತ್ತದೆ. ಗೋವಾದ ಬಡಗಣ ಬದಿಯಲ್ಲಿನ ಕಾರ್ಗಾಂವ್‍ನ ಕಮಲೇಶ್ವರ್ ಮಹರೂದ್ ಇಲ್ಲವೇ ಮಹಾದೇವ ಆಲಯದಲ್ಲೂ ನಾನ್ ವೆಜ್ ಮೀನು ಪ್ರಸಾದದ ವಿತರಣೆ ಇದೆಯಂತೆ.


ತುಳುನಾಡಿನ ಕುಡುಮ ಇಲ್ಲವೇ ಧರ್ಮಸ್ಥಳದಲ್ಲಿ ದೇವಾಲಯದಿಂದ 100 ಮೀಟರ್ ದೂರದಲ್ಲಿ ಒಂದು ಮೀನು ಮಾಂಸದ ಊಟದ ಹೋಟೆಲ್ ಇತ್ತು. ಏಳು ಶತಮಾನಗಳ ಹಿಂದಿನ ಈ ಹೋಟೆಲು ಮಾಂಸಾಹಾರದ ಊಟ ನೀಡದಂತೆ ಎರಡು ದಶಕದ ಹಿಂದೆ ನಿಷೇಧ ಹೇರಲಾಗಿದೆ. ಹೀಗೆಯೇ ಭಾರತದ ಸಾವಿರಾರು ಹಿಂದೂ ದೇವಾಲಯಗಳಲ್ಲಿ ಮಾಂಸಾಹಾರದ ಪ್ರಸಾದ ಇದ್ದುದು ನಿಂತು ಹೋಗಿರಬಹುದು. ಶಿರಸಿ, ಅಂಬಲಪಾಡಿ, ಕಾಪು ಮೊದಲಾದೆಡೆ ಮಾರಿಯಮ್ಮನಿಗೆ ಕೋಣ ಕಡಿಯುತ್ತಿದ್ದರು ಎಂದು ಹೇಳುತ್ತಾರೆ ಆ ಕಾಲದವರು. ಈಗ ಅವೆಲ್ಲ ಇಲ್ಲ ಎಂದರೆ ಇರಲೇ ಇಲ್ಲ ಎಂದು ಹೇಳಲಿಕ್ಕಾಗದು.


ಹಿಮಾಚಲ ಪ್ರದೇಶದ ಹಮೀರಪುರ ಬಳಿಯ ಗುಡ್ಡದ ಮೇಲೆ ಪ್ರಾಕೃತಿಕ ಗವಿಯಲ್ಲಿ ಇರುವ ಕ್ಷೇತ್ರ ಬಾಬಾ ಬಾಲಕನಾಥ್ ಟೆಂಪಲ್. ಇಲ್ಲಿ ಆಡು ಬಲಿ ನೀಡಿ ಪ್ರಸಾದ ಮಾಡಿ ಹಂಚುತ್ತಾರೆ. ತಮಿಳುನಾಡಿನ ಮಧುರೈ ಸುತ್ತ ಮುತ್ತ ಹಲವು ಕಡೆ ಮುನಿಯಾಂಡಿ ಆಲಯಗಳು ಇವೆ. ಇವುಗಳು ಕೂಡ ಮಾಂಸ ಪ್ರಸಾದದವುಗಳು. ಮುಖ್ಯವಾಗಿ ಬಿರಿಯಾನಿ ಪ್ರಸಾದ. ತಮಿಳುನಾಡಿನ ಹೋಟೆಲುಗಳಲ್ಲಿ ಮುನಿಯಾಂಡಿ ಮಾಂಸದ ಊಟದ, ಬಿರಿಯಾನಿ ಹೋಟೆಲುಗಳು ಕೂಡ ತುಂಬ ಪ್ರಸಿದ್ಧವಾದವುಗಳಾಗಿವೆ. ಪುರಿಯ ಬಿಮಲ ಶಕ್ತಿ ದೇವಾಲಯದಲ್ಲೂ ಮಾಂಸ ಪ್ರಸಾದ ಮತ್ತು ಸಸ್ಯಾಹಾರ ಪ್ರಸಾದ ಎರಡೂ ಇರುವುದಾಗಿ ಹೇಳಲಾಗಿದೆ.


ಉತ್ತರ ಪ್ರದೇಶದ ತರುಕುಲ್ಲ ದೇವಿಗೆ ಮಡಕೆಯಲ್ಲಿ ಮಾಡಿದ ಮಾಂಸವೇ ನೈವೇದ್ಯ. ಪಡುವಣ ಬಂಗಾಳದ ಕೈಲ್‍ಘಾಟ್ ಆಲಯ, ತಾರಾಪಿತ್ ಆಲಯ, ದಕ್ಷಿಣೇಶ್ವರ ಕಾಲಿ ಹೀಗೆ ಮೀನು ಮಾಂಸ ಪ್ರಸಾದದ ಮತ್ತು ನೈವೇದ್ಯದ ದೇವಾಲಯಗಳು ಭಾರತದಲ್ಲಿ ನೂರಾರು ಇವೆ. ಅಸ್ಸಾಂ ಕಾಮಾಕ್ಯ ದೇವಾಲಯ ಈ ವಿಷಯದಲ್ಲಿ ಜಗತ್ಪ್ರಸಿದ್ಧವಾಗಿದೆ. ಹಿಂದೂ ಶಬ್ದದ ದುರುಪಯೋಗ ಮಾತ್ರ ತಿಳಿದವರಿಗೆ ಇದೆಲ್ಲ ಎಲ್ಲಿ ಗೊತ್ತಾಗಬೇಕು?

Related Posts

Leave a Reply

Your email address will not be published.