ಇ.ಎಂ.ಎಸ್. ಗ್ರಂಥಾಲಯ ಸಮಿತಿಯಿಂದ ಓಣಂ ಆಚರಣೆ
ಕುಂಬಳೆ : ಬಲಿ ಚರ್ಕವರ್ತಿಯನ್ನು ಬರಮಾಡಿಕೊಳ್ಳುವ ಓಣಂ ಹಬ್ಬವು ಸಮೃದ್ಧಿ ಫಲವತ್ತಿನ ಸಂಕೇತವಾಗಿ ಎಲ್ಲಾ ವರ್ಗ , ಸಮುದಾಯವನ್ನು ಬೆಸೆಯುವ ಹಬ್ಬವಾಗಿದೆ. ಗಡಿನಾಡಿನಲ್ಲೂ ಓಣಂ ಸಂಭ್ರಮ ಮನೆ ಮಾಡಿದೆ. ಕಾಸರಗೋಡು ಜಿಲ್ಲೆಯು ಸಪ್ತ ಭಾಷೆಗಳ ಸಂಗಮ ನಾಡು , ಸರ್ವ ಭಾಷೆ, ಸಂಸ್ಕೃತಿಯ ಸೌಹಾರ್ಧತೆಯ ಬೀಡು , ಇದು ಮಂಜೇಶ್ವರ ಗೋವಿಂದ ಪೈ ಅವರಂತ ಕನ್ನಡದ ಶ್ರೇಷ್ಠ ಕವಿವರ್ಯರು ನಡೆದಾಡಿದ ನಾಡು, ಇ.ಎಂ.ಎಸ್. ನಂಬೂದೂರಿಪಾಡ್ ಅವರಂತಹ ಅಪ್ರತಿಮ ಹೋರಾಟಗಾರರಿಂದ ಪ್ರೇರಣೆ ಪಡೆದ ನಾಡು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮಳಿ ನಾರಾಯಣ ಗಟ್ಟಿ ಅವರು ಹೇಳಿದರು.
ಅವರು ಕುಂಬಳೆ ಇ.ಎಂ.ಎಸ್. ಸ್ಮಾರಕ ಗ್ರಂಥಾಲಯ ಸಮಿತಿಯ ವತಿಯಿಂದ ಮಳಿ ಗೋಪಾಲಕೃಷ್ಣ ಗಟ್ಟಿ ಅವರ ನಿವಾಸದಲ್ಲಿ ನಡೆದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲ ಉದಯ ಕುಮಾರ್ , ನಿವೃತ್ತ ಶಿಕ್ಷಕ ವಿಜಯನ್ , ಉದ್ಯಮಿ ಮಮ್ಮುಂಞ , ಗ್ರಂಥಾಲಯ ಸಮಿತಿಯ ಅಧ್ಯಕ್ಷೆ ಗೀತಾ , ಗ್ರಂಥಾಲಯ ಸಮಿತಿಯ ಪಧಾಧಿಕಾರಿ ಪೂರ್ಣಿಮಾ ಗಟ್ಟಿ , ಗೋಪಾಲಕೃಷ್ಣ ಗಟ್ಟಿ ಮೊದಲಾದವರು ಮಾತನಾಡಿದರು.ಓಣಂ ಆಚರಣೆಯ ಸಲುವಾಗಿ ಪೂಕಳಂ ರಚಿಸಲಾಗಿತ್ತು, ಕೋವಿಡ್ ನಿಯಮ ಪಾಲನೆಯೊಂದಿಗೆ ನಡೆದ ಕಾರ್ಯಕ್ರಮದ ಮುಕ್ತಾಯದಲ್ಲಿ ಓಣಂ ಸವಿಯನ್ನು ವಿತರಿಸಲಾಯಿತು.