ವೃದ್ಧೆಯೊಬ್ಬರ ಕಣ್ಣಿನಲ್ಲಿತ್ತು ಜೀವಂತ ಹುಳ : ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಯಶಸ್ವಿ ಚಿಕಿತ್ಸೆ

ಪ್ರಖ್ಯಾತ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದ ವೈದ್ಯರು ವೃದ್ಧೆಯೊಬ್ಬರ ಕಣ್ಣಿನಿಂದ ಜೀವಂತ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ತೀವ್ರವಾದ ಕಣ್ಣು ನೋವಿನಿಂದ ಬಳಲುತ್ತಿದ್ದ 74 ವರ್ಷದ ವೃದ್ಧೆಯ ಕಣ್ಣಿನಿಂದ ವೈದ್ಯರಾದ ಡಾ. ಕೃಷ್ಣ ಪ್ರಸಾದ್ ಅವರ ತಂಡ ತುರ್ತು ಚಿಕಿತ್ಸೆ ನಡೆಸಿ ಈ ಹುಳ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.


ತೀವ್ರ ಕಣ್ಣು ನೋವಿನಿಂದ ಬಳಲುತ್ತಿದ್ದ ವೃದ್ಧೆ, ಜೂ 1 ರಂದು ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿದ್ದರು. ವಿಪರೀತ ಎಡ ಕಣ್ಣುನೋವಿನ ಬಗ್ಗೆ ವೈದ್ಯರ ಬಳಿ ಹೇಳಿದ್ದರು. ಈ ವೇಳೆ ಪರೀಕ್ಷಿಸಿದ ವೈದ್ಯ ಡಾ. ಕೃಷಪ್ರಸಾದ್ ಅವರು ಜೀವಂತ ಹುಳು ಅಕ್ಷಿಪಟಲದ ಸುತ್ತು ತಿರುಗುತ್ತಲೇ ಇರುವುದನ್ನು ಗಮನಿಸಿದ್ದಾರೆ. ತಡ ಮಾಡಿದರೆ ಮತ್ತಷ್ಟು ಅಪಾಯವೆಂದು ಅರಿತ ಡಾ. ಕೃಷ್ಣಪ್ರಸಾದ್ ಮತ್ತು ಅವರ ವೈದ್ಯರ ತಂಡ ನೇತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಿದ್ದರು. ಹುಳವನ್ನು ತಕ್ಷಣ ನಿಷ್ಕ್ರಿಯಗೊಳಿಸಲು ಔಷಧಿಯನ್ನು ನೀಡಲಾಯಿತು. ಇದರ ಪರಿಣಾಮವೋ ಏನೋ ಎಡಗಣ್ಣಿನಲ್ಲಿದ್ದ ಹುಳು ಕಾಣದಾಯಿತು. ಕಣ್ಣು ನೋವು ಮಾಯವಾಯಿತು. ಇದರಿಂದ ತುಸು ನೆಮ್ಮದಿ ಪಡೆದ ವೃದ್ಧೆ ಮನೆಗೆ ತೆರಳಿದರು. ಮತ್ತೆ 3 ದಿನಗಳ ಬಳಿಕ ಕಣ್ಣಿನಲ್ಲಿ ಯಾವುದೇ ತೊಂದರೆಯು ಇಲ್ಲ ಎಂದು ತಿಳಿಸಿದ್ದರು.

ಆದರೆ ಜೂನ್ 6ರ ಭಾನುವಾರ ಸಾಯಂಕಾಲ ಇವರಿಗೆ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ಮತ್ತೆ ಆ ವೃದ್ಧೆ ಪ್ರಸಾದ ನೇತ್ರಾಲಯಕ್ಕೆ ಆಗಮಿಸಿದ್ದಾರೆ. ಕೂಡಲೇ ಸ್ಪಂದಿಸಿದ ಡಾ. ಕೃಷ್ಣಪ್ರಸಾದ್ ಅವರ ತಂಡ ತಡ ಮಾಡದೆ, ಹೊರ ರೋಗಿ ವಿಭಾಗದಲ್ಲಿಯೇ ತುರ್ತು ಚಿಕಿತ್ಸೆ ನೀಡಿದ್ದಾರೆ. ಆಶ್ಚರ್ಯವೆಂಬಂತೆ ಜೀವಂತ ಹುಳುವನ್ನು ಹೊರ ತೆಗೆದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯ ಡಾ. ಕೃಷ್ಣಪ್ರಸಾದ್ ಜೂನ್ 6ರಂದು ನೇತ್ರದ ಹೊರಪದರದಿಂದ ಹೊರತೆಗೆದ ಮೊದಲ ಮಾದರಿಯ ಹುಳುವಾಗಿದೆ. ಈ ಹುಳದ ಕುರಿತಾಗಿ ಮತ್ತಷ್ಟು ಅಧ್ಯಯನ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಅಲ್ಲಿಂದ ಮಾಹಿತಿ ಬರಬೇಕಾಗಿದೆ” ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ವೈದ್ಧೆಯೊಬ್ಬರ ಕಣ್ಣಿನಲ್ಲಿ ಈ ರೀತಿಯ ಉದ್ದವಾದ ಹುಳು ಕಂಡುಬಂದಿದ್ದು, ವೈದ್ಯ ಲೋಕವೇ ಅಚ್ಚರಿ ಮೂಡಿಸುವಂತಾಗಿದೆ. ವೃದ್ಧ ಮಹಿಳೆಯ ಕಣ್ಣಿನಲ್ಲಿ ಕಂಡು ಬಂದ ಈ ಹುಳವನ್ನು ತೆಗೆದು ಮಹಿಳೆಗೆ ಉಪಶಮನ ಮಾಡಿದ ಪ್ರಸಾದ್ ನೇತ್ರಾವಲಯದ ವೈದ್ಯರ ತಂಡಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

 

Related Posts

Leave a Reply

Your email address will not be published.