ಉಪ್ಪಿನಂಗಡಿ:ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿ, ಬಾಲಕ ಮೃತ್ಯು, ತಾಯಿ ಸ್ಥಿತಿ ಗಂಭೀರ
ಉಪ್ಪಿನಂಗಡಿ: ಬುಲೆಟ್ ಟ್ಯಾಂಕರ್‌ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಹಾಗೂ ಅವನ ತಾಯಿ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಬೈಪಾಸ್‌ನಲ್ಲಿ ನಡೆದಿದೆ.
ಉಪ್ಪಿನಂಗಡಿ ಸಮೀಪದ ಕಲ್ಲೇರಿ ನಿವಾಸಿ ಅದ್ವೀತ್ (16) ಮೃತಪಟ್ಟ ಬಾಲಕ. ಅಂಗನವಾಡಿಯಲ್ಲಿ ಟೀಚರ್ ಆಗಿರುವ ಬಾಲಕನ ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕ ತನ್ನ ತಾಯಿಯ ಜೊತೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಮೀಪದ ಪೆಟ್ರೋಲ್ ಬಂಕಿನಲ್ಲಿ ದ್ವಿ ಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುತ್ತಿರುವಾಗ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಟ್ಯಾಂಕರ್ ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತಿತ್ತು. ತಾಯಿ ಮತ್ತು ಮಗ ಉಪ್ಪಿನಂಗಡಿ ತಮ್ಮ ಮನೆಗೆ ಕಡೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದ ಒಂದು ಬದಿಗೆ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು, ಆಗ ನಿಯಂತ್ರಣ ತಪ್ಪಿ ಬಾಲಕ ಹಾಗೂ ತಾಯಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ನಗರ ಸಂಚಾರಿ ಠಾಣೆ ಎಸ್‌ಐ ರಾಮನಾಯ್ಕ್ ಹಾಗೂ ಸಿಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.