ನಳಿನ್ ಕುಮಾರ್ಗೆ ಎನ್ ಇಪಿ ಅಂದ್ರೇನು ಗೊತ್ತಾ..?: ಮಂಗಳೂರಲ್ಲಿ ಎನ್ಎಸ್ಯುಐ ನಾಯಕರ ಆಕ್ರೋಶ
ರಾಜ್ಯದಲ್ಲಿ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ಶಿಕ್ಷಣ ನೀತಿ ಹೇಗಿರಬೇಕು, ಏನೆಲ್ಲಾ ಬದಲಾವಣೆ ಆಗಿದೆ ಎನ್ನುವುದರ ಬಗ್ಗೆ ಶಾಲೆ, ಕಾಲೇಜಿನ ಆಡಳಿತ ಸಂಸ್ಥೆಯಾಗಲೀ, ಶಿಕ್ಷಕ ವೃಂದಕ್ಕಾಗಲೀ ಮಾಹಿತಿ ಇಲ್ಲ. ಹತ್ತನೇ ಕ್ಲಾಸ್ ಕಲಿಯದವರು ಶಿಕ್ಷಣ ನೀತಿ ಮಾಡಿದ್ದಾರೆ. ಇಲ್ಲಿನ ಬಿಜೆಪಿ ನಾಯಕರಿಗಾಗಲೀ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಗೆ ಆಗಲೀ ಶಿಕ್ಷಣ ನೀತಿಯ ಬಗ್ಗೆ ಗೊತ್ತಾ ಎಂದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್ಎಸ್ ಯುಐ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎನ್ ಎಸ್ ಯುಐ ಘಟಕದ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ನಾವು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ರಾಜ್ಯಾದ್ಯಂತ ಜನಜಾಗೃತಿ ಮೂಡಿಸುತ್ತಿದ್ದೇವೆ. ಶಿಕ್ಷಣ ನೀತಿಯಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎನ್ನುವುದರ ವಿದ್ಯಾರ್ಥಿಗಳಿಗೆ, ಎಲ್ಲ ಕಾಲೇಜು ಆಡಳಿತಗಳಿಗೆ ತಿಳಿಯಬೇಕು. ಶಿಕ್ಷಣ ನೀತಿ ಬದಲಾವಣೆ ಮಾಡುತ್ತಿರುವ ಬಗ್ಗೆ ಚರ್ಚೆ ಆಗಬೇಕು. ಅದ್ಯಾವುದನ್ನೂ ಮಾಡದೇ ಇವರು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರುತ್ತಿದ್ದಾರೆ. ಈ ರೀತಿಯ ತರಾತುರಿಯನ್ನು ಇವರು ಯಾಕೆ ಮಾಡುತ್ತಿದ್ದಾರೆ. ಇಲ್ಲಿನ ಬಿಜೆಪಿ ನಾಯಕರಿಗೆ ಕೇಳಿದರೆ, ರಾಷ್ಟ್ರೀಯ ಶಿಕ್ಷಣ ನೀತಿ ಏನು ಎನ್ನುವ ಬಗ್ಗೆ ಹೇಳುತ್ತಾರೆಯೇ.. ಬೇಕಿದ್ದರೆ ಕೇಳಿ ನೋಡಿ.. ಇಲ್ಲಿನ ಎಂಪಿ ನಳಿನ್ ಕುಮಾರ್ ಶಿಕ್ಷಣ ನೀತಿ ಬದಲಾವಣೆ ಬಗ್ಗೆ ಐದು ನಿಮಿಷ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಬೋರ್ಡ್ ಎಕ್ಸಾಂ ಇಲ್ಲ ಎನ್ನುತ್ತಿದ್ದಾರೆ. ಯಾಕಾಗಿ ಬೋರ್ಡ್ ಎಕ್ಸಾಂ ರದ್ದು ಪಡಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಈವರೆಗೂ ಬೋರ್ಡ್ ಎಕ್ಸಾಂ ಆಗಿತ್ತು. ಅದೊಂದು ಜೀವನದಲ್ಲಿ ಪ್ರಮುಖ ಘಟ್ಟ ಆಗಿತ್ತು. ಅದರ ಸರ್ಟಿಫಿಕೇಟಿಗೆ ಹೆಚ್ಚಿನ ಮಾನ್ಯತೆಯೂ ಇತ್ತು. ಆದರೆ, ಈಗ ಅದನ್ನು ರದ್ದುಪಡಿಸಿ ಏನನ್ನು ಸಾಧಿಸುತ್ತಿದ್ದಾರೆ. ಇದಲ್ಲದೆ, ಡಿಗ್ರಿಯನ್ನು ಮೊದಲ ವರ್ಷ, ದ್ವಿತೀಯ ವರ್ಷ ಮಾಡಿಯೂ ಬಿಡಬಹುದು ಎಂದು ಹೇಳುತ್ತಿದ್ದಾರೆ. ಆಮೂಲಕ ಪದವಿ ಅನ್ನುವುದಕ್ಕೆ ಮಾನ್ಯತೆ ಇಲ್ಲದ ರೀತಿ ಮಾಡುತ್ತಿದ್ದಾರೆ. ಪದವಿಯನ್ನು ಬಡ ವಿದ್ಯಾರ್ಥಿಗಳು ಕಷ್ಟಪಟ್ಟಾದರೂ ಮೂರು ವರ್ಷ ಪೂರೈಸುತ್ತಿದ್ದರು. ಈಗ ಅನಿವಾರ್ಯ ಅಲ್ಲ ಎನ್ನುವಾಗ ಹೊರಬಂದರೆ, ಭವಿಷ್ಯದಲ್ಲಿ ಪದವಿ ಪೂರೈಸದವರ ಸಂಖ್ಯೆ ಹೆಚ್ಚಿದರೆ, ಅದಕ್ಕೆ ಹೊಣೆ ಈಗಿನ ಸರಕಾರವೇ ಆಗುತ್ತದೆಯೇ.. ಇದೊಂದು ಶಿಕ್ಷಣ ನೀತಿಯ ಗಂಭೀರ ಪರಿಣಾಮ ಅಲ್ಲವೇ ಎಂದು ಎನ್ಎಸ್ಯುಐ ಮುಖಂಡರಾದ ರಫೀಕ್ ಅಲಿ ಪ್ರಶ್ನೆ ಮಾಡಿದರು.
ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಇಂದಿನಿಂದ 10 ದಿನಗಲ ಕಾಲ ಶಾಲಾ ಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚುವಿಕೆಯೊಂದಿಗೆ ೨ ಲಕ್ಷ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಅದನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಎನ್ಎಸ್ಯುಐ ಅಧ್ಯಕ್ಷ ಸವದ್ ಸುಳ್ಯ ಹೇಳಿದರು.ಸುದ್ದಿಗೋಷ್ಠಿಯಲ್ಲಿ
ಎನ್ಎಸ್ಯುಐ ಪ್ರಮುಖರಾದ ಭರತ್ ರಾಮ್ ಗೌಡ, ಸುಹಾನ್ ಆಳ್ವ, ನವೀದ್, ಝಾಕಿರ್, ವಿನಯ್, ಝೈನ್ ಆತೂರು, ಪವನ್ ಸಾಲಿಯಾನ್, ಅಂಕುಶ್ ಶೆಟ್ಟಿ, ಬಾತಿಶ್ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು.