ಪುತ್ತೂರಿನ ಬಹುಮುಖ ಸಾಧಕ ವಿದ್ವಾನ್ ಮಂಜುನಾಥ್‌ಗೆ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ
ಪುತ್ತೂರು: ಸಂಗೀತ, ನೃತ್ಯ, ಬರೆಹ, ಹಾಡುಗಾರಿಕೆ, ಕಥೆ, ಕವನ, ಯಕ್ಷಗಾನ ಹೀಗೆ ಬಹುಮುಖ ಪ್ರತಿಭೆಯಾಗಿರುವ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರ ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಿಕೊಂಡಿದೆ.
ಭರತನಾಟ್ಯದಲ್ಲಿ ವಿಶಿಷ್ಟ ಆಸಕ್ತಿಯನ್ನು ಹೊಂದಿರುವ ಅವರು 23 ನಿಮಿಷದಲ್ಲಿ 20 ವಿಭಿನ್ನ ತಾಳ
ಭರತನಾಟ್ಯದಲ್ಲಿ ಹಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ಮಂಜುನಾಥ ಅವರು ಎರಡು ಕೈಗಳಿಂದ ವಿಭಿನ್ನ ತಾಳ ಪ್ರಯೋಗಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದ್ದು, ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಪ್ರಮಾಣ ಪತ್ರ ಲಭಿಸಿದೆ. 2 ತಿಂಗಳ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದ್ದರೆ, ಒಂದು ವಾರದ ಹಿಂದಷ್ಟೇ ಏಷ್ಯಾ ಬುಕ್ ಆಫ್ ರೆಕಾರ್ಡ್ ಅವರ ಹೆಸರನ್ನು ದಾಖಲಿಸಿಕೊಂಡಿದೆ.
ಅವರು ಶಾಸ್ತ್ರೀಯ ಕಲಾ ಪ್ರಕಾರದಲ್ಲೇ ದ್ವಿತಾಳ ಪ್ರಯೋಗ ಸಾಧನೆ ಪ್ರಥಮವೆಂದು ಪರಿಗಣಿಸಲ್ಪಟ್ಟಿದೆ.ಮಂಜುನಾಥ್ ಅವರು ತನ್ನ ಸಾಧನೆಗಳ ದಾರಿಯ ಕುರಿತು ಮಂಗಳವಾರ ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಹಂಚಿಕೊಂಡರು.ಬಾಲ್ಯದಲ್ಲಿಯೇ ನೃತ್ಯಾಭ್ಯಾಸ ತನ್ನ 6 ವರ್ಷ ಪ್ರಾಯದಲ್ಲಿಯೇ ನೃತ್ಯಾಭ್ಯಾಸ ಕಲಿಕೆ ಆರಂಭಿಸಿದ್ದ ಮಂಜುನಾಥ್ ಅವರು ಬಳಿಕ ವಿವಿಧ ಆಯಾಮಗಳಲ್ಲಿ ತನ್ನ ಪ್ರಯೋಗಶೀಲತೆಯನ್ನು ಮುಂದುವರಿಸಿಕೊಂಡು ಹೋಗಿದ್ದರು. ಭರತನಾಟ್ಯದಲ್ಲಿ ಪುಷ್ಪಾಂಜಲಿ, ಅಲರಿಪು, ಜತಿಸ್ವರ, ದರು, ತಿಲ್ಲಾನ ಮತ್ತಿತರು ಸಾಹಿತ್ಯಕ ರಚನೆಗಳನ್ನೂ ಸಂಯೋಜಿಸಿರುವ ಅವರು ನೃತ್ಯ ಮತ್ತು ತಾಳಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಛಾಪು ಮೂಡಿಸಿದ್ದಾರೆ. 600ಕ್ಕೂ ಅಧಿಕ ಭರತನಾಟ್ಯ ಕಾರ್ಯಕ್ರಮವನ್ನು ನೀಡಿರುವ ಅವರು ಹವ್ಯಾಸಿ ಯಕ್ಷಗಾನ ಕಲಾವಿದನಾಗಿ 180ಕ್ಕೂ ಅಧಿಕ ಪ್ರದರ್ಶನ ನೀಡಿದ್ದಾರೆ.
ತಾಳಾವಧಾನ ವಿಶಿಷ್ಟ ಪ್ರಯೋಗ
ತಾಳಾವಧಾನ ವಿಶಿಷ್ಟ ಪ್ರಕ್ರಿಯೆಯಲ್ಲಿ 50ಕ್ಕೂ ಅಧಿಕ ಪ್ರಯೋಗಗಳನ್ನು ಮಾಡಿರುವ ಹೆಗ್ಗಳಿಕೆ ಇವರದಾಗಿದೆ. ಚಲನ ಚಿತ್ರ ಗೀತೆಗಳಿಗೂ ತಾಳವನ್ನು ಅಳವಡಿಸಿ ತನ್ನದೇ ಆದ ರೂಪ ನೀಡಿದ ಅವರು ಮಹಿಳೆ ಮತ್ತು ಮಕ್ಕಳ ಧ್ವನಿಯಲ್ಲಿ ಹಾಡುವ ಮೂಲಕವೂ ಎಲ್ಲರ ಮನ ಗೆದ್ದಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಆನ್‌ಲೈನ್ ಮೂಲಕ ಭರತನಾಟ್ಯ ಕಲಿಕಾ ಕೆಲಸವನ್ನು ಮಾಡಿ ಕಲಾವಿದರಿಗೆ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.
ಸಾಧನೆಗಳು:
2008ರಲ್ಲಿ ಚಂದನ ವಾಹಿನಿಯ ಬಿ ಗ್ರೇಡ್ ಕಲಾವಿದರಾಗಿ ಕೆಲಸ ಮಾಡಿದ್ದ ಅವರಿಗೆ 2007ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿಯ ವಿದ್ಯಾರ್ಥಿ ವೇತನದ ಗೌರವ. 2008ರಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಸುವರ್ಣ ವಾಹಿನಿಯ ಸೂಪರ್ ಸ್ಟಾರ್ ಆಫ್ ಕರ್ನಾಟಕ ರಿಯಾಲಿಟಿ ಶೋನಲ್ಲಿ ಬೆಸ್ಟ್ ಪರ್ಫಾರ್ಮರ್ ಗೌರವ, 2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯುವ ಪ್ರತಿಭಾ ಪ್ರಶಸ್ತಿ, 2013ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರಯಾಂಕ್ ಹಾಗೂ ಮೈಸೂರು ಕೇಂದ್ರದಲ್ಲಿ ಪ್ರಥಮ ರಯಾಂಕ್ ಲಭಿಸಿದೆ.
ದರ್ಶನ ಪ್ರೇರಣೆ, ನವಿಲು ದತ್ತು
ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳ ಬಗ್ಗೆ ದತ್ತು ಪಡೆಯುವ ಬಗ್ಗೆ ಚಲನ ಚಿತ್ರನಟ ದರ್ಶನ್ ಅವರು ನೀಡಿರುವ ಕರೆಯಿಂದ ಪ್ರೇರಿತರಾದ ಮಂಜುನಾಥ್ ಮೈಸೂರು ಮೃಗಾಲಯದ ಬಿಳಿ ನವಿಲೊಂದನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದಾರೆ. ತಾನು ಬಿಳಿ ನವಿಲನ್ನು ದತ್ತು ಪಡೆದುಕೊಂಡಿರುವುದಕ್ಕೆ ಕಾರಣ ನೀಡಿರುವ ಅವರು ಬಿಳಿ ನವಿಲುಗಳ ಸಂಖ್ಯೆ ಬಹಳ ಕಡಿಮೆಯಿದೆ. ಈ ನವಿಲುಗಳ ಹೆಚ್ಚಾಗಬೇಕಾಗಿದೆ ಇದಕ್ಕಾಗಿ ಬಿಳಿ ನವಿಲನ್ನೇ ದತ್ತು ಪಡೆದುಕೊಂಡಿದ್ದೇನೆ ಎಂದು ಹೇಳುತ್ತಾರೆ.
ವೃತ್ತಿಯಲ್ಲಿ ಉಪನ್ಯಾಸಕರಾಗಿ ಸುಮಾರು 7 ವರ್ಷಗಳ ಕಾಲ ಕೆಲಸ ಮಾಡಿರುವ ಮಂಜುನಾಥ್ ಅವರು ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪ.ಪೂ ಕಾಲೇಜ್‌ನಲ್ಲಿ, ಕಲ್ಲಡ್ಕ ಪ.ಪೂ ಕಾಲೇಜ್‌ನಲ್ಲಿ ಹಾಗೂ ಮೂಡಬಿದ್ರೆಯ ಆಳ್ವಾಸ್ ಪದವಿ ಕಾಲೇಜ್‌ನಲ್ಲಿ ಅರ್ಥಶಾಸ್ತ್ರ ಪಠ್ಯದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಲಿಕೆ ಎಂಬುದಕ್ಕೆ ಕೊನೆಯಿಲ್ಲ ಬದುಕಿನಲ್ಲಿ ಕಲಿಯುವುದು ಸಾಕಷ್ಟಿದೆ ಎನ್ನುವ ಅವರು ಭರತನಾಟ್ಯ ಸೇರಿದಂತೆ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಆಳವಾದ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಮದ್ರಾಸ್ ವಿವಿಯಲ್ಲಿ ಭರತನಾಟ್ಯದಲ್ಲಿ ಎಂ.ಎ. ಪದವಿಯನ್ನು ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿ ಇನ್ನಷ್ಟು ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತೇನೆ ಎನ್ನುವ ಅವರು ತನ್ನ ಕುಟುಂಬದ ಹಾಗೂ ಗುರುಗಳ ಬೆಂಬಲದೊಂದಿಗೆ ಆಳ ಅಧ್ಯಯನ ನಡೆಸುವ ಗುರಿಯಿದೆ. ಅಲ್ಲದೆ ಬಡ ಕಲಾವಿದರಿಗೆ ಸಹಕಾರ ನೀಡುವ ಯೋಚನೆಯಿದೆ.ಇನ್ನಷ್ಟು ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸುವ ಇರಾದೆಯಿದೆ ಈ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದೇನೆ ಎನ್ನುತ್ತಾರೆ.
ಭವಿಷ್ಯದ ತಲೆಮಾರಿನಲ್ಲಿ ಕಲಾಸಾಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶ್ರೀ ಮಂಜುನಾಥ ಸುನಾದ ಮ್ಯೂಸಿಕಲ್ ಎನ್ನುವ ಸುಗಮ ಸಂಗೀತ ತಂಡದ ನಿದೇರ್ಶಕರಾಗಿ ರಾಜ್ಯಾದ್ಯಂತ ಕಾರ್ಯಕ್ರಮ ನೀಡಿರುವ ಅವರು ಸಂಪನ್ಮೂಲ ವ್ಯಕ್ತಿಯಾಗಿ ನೃತ್ಯ ಮತ್ತು ತಾಳಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ನಿವೃತ್ತ ಕನ್ನಡ ಉಪನ್ಯಾಸಕ ಜಿ.ಆರ್. ನರಸಿಂಹ ಭಟ್ ಮತ್ತು ಗಾಯತ್ರಿ ದಂಪತಿಯ ಪುತ್ರನಾಗಿರುವ ಮಂಜುನಾಥ್ ಅವರು ತನ್ನ ಬೆಳವಣಿಗೆಯಲ್ಲಿ ಕುಟುಂಬದ ಮತ್ತು ಗುರುಗಳ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ.