ಮಂಡ್ಯದಲ್ಲಿ ದಿನೇಶ್ ಗೂಳಿ ಗೌಡ ಪರ ಪ್ರಚಾರದ ಅಖಾಡಕ್ಕಿಳಿದ ಯುವ ಕಾಂಗ್ರೆಸ್
ನಾಗಮಂಗಲ, ನ 25; ಡಿಸೆಂಬರ್ 10 ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ದಿನೇಶ್ ಗೂಳಿ ಗೌಡ ಪರ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಚಾರದ ಅಖಾಡಕ್ಕೆ ಇಳಿದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಸಚಿವರಾದ ಚಲುವರಾಯ ಸ್ವಾಮಿ, ನರೇಂದ್ರ ಸ್ವಾಮಿ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಸಭೆಯಲ್ಲಿ ಮಾತನಾಡಿ, ಯುವ ನಾಯಕ ದಿನೇಶ್ ಗೂಳಿ ಗೌಡ ಅವರನ್ನು ಗೆಲ್ಲಿಸಲು ಎಲ್ಲರೂ ಶಕ್ತಿ ಮೀರಿ ಶ್ರಮಿಸಬೇಕು. ಮಂಡ್ಯದಿಂದ ಯುವ ನಾಯಕನನ್ನು ವಿಧಾನಪರಿಷತ್ತಿಗೆ ಆರಿಸಿಕಳಹಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಎಂದರೆ ಇಡೀ ದೇಶದಲ್ಲಿ ದ್ವೇಷದ ಅಲೆ ಎನ್ನುವಂತಾಗಿದೆ. ಕರ್ನಾಟಕದಲ್ಲಿ ಇಂತಹ ದ್ವೇಷಕ್ಕೆ ಆಸ್ಪದ ಇಲ್ಲ. ರಾಜ್ಯದಲ್ಲಿರುವುದು ಡಬಲ್ ಎಂಜಿನ್ ಸರ್ಕಾರ ಎನ್ನುತ್ತಿದ್ದಾರೆ. ಆದರೆ ಈ ಸರ್ಕಾರದಿಂದ ಯುವ ಸಮೂಹಕ್ಕೆ ಯಾವುದೇ ರೀತಿಯಲ್ಲೂ ಅನುಕೂಲವಾಗಿಲ್ಲ. ಕೇಂದ್ರ ನರೇಂದ್ರ ಮೋದಿ ಸರ್ಕಾರ ಯುವಕರಿಗಾಗಿ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಸಾಕಾರಗೊಂಡಿಲ್ಲ. ರಾಜ್ಯದಲ್ಲೂ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಜನ ವಿರೋಧಿ ಬಿಜೆಪಿಯನ್ನು ಸೋಲಿಸಬೇಕು ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಅತ್ಯುತ್ತಮ ಕೆಲಸ ಮಾಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಜನರ ಸಂಕಷ್ಷಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಮಂಡ್ಯದಲ್ಲಿ ಜನ ವಿರೋಧಿ ಜೆಡಿಎಸ್ ನಾಯಕರ ವಿರುದ್ಧವೂ ಹೋರಾಟ ಮಾಡುವಂತೆ ಎಂ.ಎಸ್. ರಕ್ಷಾ ರಾಮಯ್ಯ ಕರೆ ನೀಡಿದರು.