ಮುಷ್ಕರದಿಂದ ಹಿಂದೆ ಸರಿದ ಕೆ ಎಸ್ ಆರ್ ಟಿ ಸಿ ಮಜ್ದೂರ್ ಸಂಘದ ಸದಸ್ಯರು

ಪುತ್ತೂರು: ವೇತನ ಪಾವತಿ ವಿಳಂಬ ಮತ್ತು ನಿವೃತ್ತ ನೌಕರರ ಸೌಲಭ್ಯ ಪಾವತಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಯ ಅಧಿಕಾರಿಗಳ ವಿರುದ್ದ ಅಮರಣಾಂತ ಉಪವಾಸ ನಿರತರಾಗಿದ್ದ ಪುತ್ತೂರು ವಿಭಾಗ ಕೆಎಸ್‍ಆರ್‍ಟಿಸಿ ಮಜ್ದೂರ್ ಸಂಘದ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಮಂಗಳವಾರ ರಾತ್ರಿ ನಡೆಸಿದ ಮಾತುಕತೆ ಪರಿಣಾಮ ತಮ್ಮ ಮುಷ್ಕರದಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಸಚಿವ ಅಂಗಾರ ಅಮರಣಾಂತ ಉಪವಾಸ ನಿರತರ ಮನವೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಎಸ್‍ಆರ್‍ಟಿಸಿ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿದ್ದು ಈ ಕಾರಣದಿಂದ ಸಕಾಲದಲ್ಲಿ ವೇತನ ನೀಡಿಕೆ ಮತ್ತು ನಿವೃತ್ತ ನೌಕರರಿಗೆ ನಿವೃತ್ತಿ ಸೌಲಭ್ಯ ನೀಡಲು ತೊಂದರೆಯಾಗಿದೆ. ಕೆಎಸ್‍ಆರ್‍ಟಿಸಿ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದ ಪಾರಾಗಲು ರೂ. 220 ಕೋಟಿಯನ್ನು ಬ್ಯಾಂಕ್‍ಗಳಿಂದ ಸಾಲ ಪಡೆಯಲಿದ್ದು ಸಂಸ್ಥೆಯ ಕಟ್ಟಡಗಳನ್ನು ಅಡ ಇರಿಸಿ ಈ ಸಾಲವನ್ನು ಪಡೆಯಲಾಗುತ್ತದೆ. ಈ ಪ್ರಕ್ರಿಯೆಒಂದು ತಿಂಗಳೊಳಗೆ ನಡೆಯಲಿದೆ. ಬಳಿಕ ವೇತನ ಮತ್ತು ನಿವೃತ್ತಿ ಸೌಲಭ್ಯವನ್ನು ವಿತರಿಸಲಾಗುವುದು. ಈ ಕುರಿತಂತೆ ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಸಾರಿಗೆ ಸಚಿವರೊಂದಿಗೆ ಹಾಗೂ ಕೆಎಸ್‍ಆರ್‍ಟಿಸಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿರುವುದಾಗಿ ಸಚಿವ ಅಂಗಾರ ತಿಳಿಸಿದರು.

ಮಾತುಕತೆಯ ಸಂದರ್ಭ ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಯ ಮುಖ್ಯ ಭದ್ರತಾಧಿಕಾರಿ ಶ್ರೀನಿವಾಸ್, ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಕೆ. ಜಯಕರ ಶೆಟ್ಟಿ, ಬಿಎಂಎಸ್ ಮುಂದಾಳುಗಳಾದ ನ್ಯಾಯವಾದಿ ಶ್ರೀಗಿರೀಶ್ ಮಳಿ, ಮಾಡಾವು ವಿಶ್ವನಾಥ್ ರೈ, ಶಾಂತಾರಾಮ ವಿಟ್ಲ, ವೆಂಕಟ್ರಮಣ ಭಟ್, ರಾಮಕೃಷ್ಣ ಜಿ., ಸತ್ಯಶಂಕರ ಭಟ್, ಸಂಜೀವ ಗೌಡ,ಕರುಣಾಕರ ಗೌಡ, ಮಹಾಬಲ ಗಡಿಮಾರು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.