ಮೂಡುಬಿದಿರೆ ಪುರಸಭಾ ಅಧಿವೇಶನ : ಎಸ್ಎಫ್ಸಿ ನಿಧಿ ಕಾಮಗಾರಿ ಟೆಂಡರ್ ತಡೆ ಹಿಡಿಯಲು ಆಗ್ರಹ
ಪುರಸಭೆಯ ಬೀದಿದೀಪ, ವಿದ್ಯುತ್ ದಾರಿದೀಪ ದುರಸ್ತಿ ಮತ್ತು ನಿರ್ವಹಣೆ ಮತ್ತು ಕೊಳವೆ ಬಾವಿಗಳಿಗೆ ಜೋಡಿಸಿದ ಎಲ್ಲಾ ರೀತಿಯ ಪಂಪುಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಜೋಡಿಸಿ ದುರಸ್ತಿಪಡಿಸುವ ಕಾಮಗಾರಿಯ ಟೆಂಡರ್ ಮತ್ತು ಪುರಸಭಾ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಎಸ್ಎಫ್ಸಿ 2019-20ನೇ ಸಾಲಿನ ವಿಶೇಷ ಅನುದಾನದಡಿಯಲ್ಲಿ ಕಾಮಗಾರಿ ನಡೆಸಲು ಟೆಂಡರ್ಗೆ ಅನುಮೋದನೆ ನೀಡುವಿಕೆಯಲ್ಲಿ ಗಂಭೀರ ಲೋಪದೋಷಗಳಾಗಿವೆ. ಹೀಗಾಗಿ ಈ ಟೆಂಡರ್ಗೆ ಅನುಮೋದನೆಯನ್ನು ತಡೆಹಿಡಿಯಬೇಕೆಂದು ಸೋಮವಾರ ನಡೆದ ಪುರಸಭಾಧಿವೇಶನದಲ್ಲಿ ವಿಪಕ್ಷ ಸದಸ್ಯರು ಆಗ್ರಹಿಸಿದ ಘಟನೆ ನಡೆದಿದೆ.
ಪುರಸಭಾಧ್ಯಕ್ಷ ಪ್ರಸಾದ್ಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸುರೇಶ್ ಕೋಟ್ಯಾನ್ ಅವರು ಮಾತನಾಡಿ ಎಸ್ಎಫ್ಸಿ ೨೦೧೯-೨೦ನೇ ಸಾಲಿನ ವಿಶೇಷ ಅನುದಾನದಡಿಯಲ್ಲಿ ಕಾಮಗಾರಿ ನಡೆಸಲು ರೂ ೨೦೦ ಲಕ್ಷ ಮಂಜೂರಾಗಿದ್ದು ವಿವಿಧ ಕಾಮಗಾರಿಗಳಿಗೆ ಈ ಟೆಂಡರ್ ಕರೆಯಲಾಗಿದ್ದು ಗುತ್ತಿಗೆದಾರ ಪ್ರವೀಣ್ ಕುಮಾರ್ ಎಂಬವರಿಗೆ ಟೆಂಡರ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅನುಮೋದನೆ ದೊರಕಿದೆ ಈ ಅನುಮೋದನೆಯನ್ನು ಮರುಪರಿಶೀಲಿಸುವಂತೆ ದೂರು ಮತ್ತು ಆಕ್ಷೇಪಣೆ ನೀಡಲಾಗಿದೆ. ಪ್ರವೀಣ್ ಅವರ ಟೆಂಡರ್ ಮೊತ್ತಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಕಾಮಗಾರಿ ನಡೆಸುತ್ತೇವೆ ಎಂದು ಅಧಿಕೃತವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ತಿಳಿಸಿದ್ದರೂ ಬೇರೆಯವರಿಗೆ ನೀಡದಿರುವುದರ ಬಗ್ಗೆ ತನಿಖೆಗೆ ಒತ್ತಾಯಿಸಿದರು.
ಇದರಲ್ಲಿ ಗಂಭೀರ ಲೋಪದೋಷಗಳಾಗಿದ್ದು ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ದೂರು ನೀಡಿದ್ದೇವೆ.ಅವರು ಯುವಜನ ನಿರ್ದೇಶಕರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅವರ ವರದಿ ಬರುವವರೆಗೆ ತಾವೇನು ಮಾಡುವಂತಿಲ್ಲ ಎಂದು ಮುಖ್ಯಾಧಿಕಾರಿ ಇಂದು.ಎಂ ತಿಳಿಸಿದರು.
ಘನತ್ಯಾಜ್ಯ ನಿರ್ವಹಣೆ ಮತ್ತು ಅದನ್ನು ವಿಲೇವಾರಿ ಮಾಡಲು ವಾಹನ ಖರೀದಿಸಿದ ಕುರಿತು ಚರ್ಚೆ ನಡೆಯುತ್ತಿದ್ದಾಗ ಕೆಲವು ಸದಸ್ಯರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಪುರಸಭೆಯು ಘನತ್ಯಾಜ್ಯ ನಿರ್ವಹಣೆ, ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡುಬಂದಲ್ಲಿ ಅಂತಹವರಿಂದ ದಂಡ ವಸೂಲಿ ನಡೆಸಲು ಪುರಸಭೆ ನಿರ್ಣಯ ಕೈಗೊಂಡಿದೆ.
ಪುಚ್ಚಮೊಗರು ಸೇತುವೆಯ ಮೇಲಿಂದ ವಾಹನಗಳಲ್ಲಿ ಎಸೆಯುವ ಕಸಗಳು ನೀರು ಸಂಗ್ರಹಣಾಗಾರದ ಬಳಿ ಸಂಗ್ರಹವಾಗುವ ಬಗ್ಗೆ ಗಮನ ಸೆಳೆದರು.ಈ ಕುರಿತು ಉತ್ತರ ನೀಡಿದ ಮುಖ್ಯಾಧಿಕಾರಿ ಇಂದು ಎಂ ಪುರಸಭೆಯ 23ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವ ಕುರಿತು ಈಗಾಗಲೇ ಟೆಂಡರ್ ಕರೆಯಲಾಗಿದೆ. ಹಲವು ಮಂದಿಯಿಂದ ಈಗಾಗಲೇ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪುರಸಭೆಯಿಂದಲೇ ನೇರ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರಿಂದ ದಂಡ ವಸೂಲಿ ಮಾಡಲಾಗುವುದು. ಪುಚ್ಚಮೊಗರು ಸೇತುವೆಯ ಎರಡೂ ಬದಿಗೆ ಪರದೆ ಅಳವಡಿಸಲಾಗುವುದು ಎಂದರು.
ಪುರಸಭೆಯ ವಾಣಿಜ್ಯ ಸಂಕೀರ್ಣಗಳ ಲಕ್ಷಾಂತರ ರೂಪಾಯಿ ಬಾಡಿಗೆ ಬಾಕಿ ಇದ್ದು ಅದನ್ನು ಕೂಡಲೇ ವಸೂಲು ಮಾಡಬೇಕು ಎಂದು ಸದಸ್ಯ ರಾಜೇಶ್ ಮಲ್ಯ ಸಭೆಯ ಗಮನಕ್ಕೆ ತಂದರು. ಈ ವರ್ಷವೂ ಕೊರೊನಾದಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದುದರಿಂದ ಬಾಡಿಗೆ ವಸೂಲು ಮಾಡಲು ಸಾಧ್ಯವಾಗಿಲ್ಲ ಒಂದು ತಿಂಗಳೊಳಗೆ ಈ ಕುರಿತು ಬಾಡಿಗೆ ವಸೂಲು ಮಾಡಲಾಗುವುದು ಎಂದು ಮುಖ್ಯಾಧಿಖಾರಿ ಇಂದು ಎಂ, ಉತ್ತರಿಸಿದರು.
ಎಸ್ಸಿಎಸ್ಟಿ ಮೀಸಲಾದ ವಾರ್ಡ್ಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಟೆಂಡರ್ ಯಾಕೆ ಕರೆಯುತ್ತಿಲ್ಲ ಎಂದು ಕೊರಗಪ್ಪ ಪ್ರಶ್ನಿಸಿದರು.ಎಸ್ಸಿಎಸ್ಟಿ ಮೀಸಲಾದ ವಾರ್ಡ್ಗಳ ಕೊಳಚೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲು ೫ ಲಕ್ಷ ವೆಚ್ಚದ ಟೆಂಡರ್ ಕರೆಯಲಾಗಿದೆ. 17ನೇ ವಾರ್ಡಿನಲ್ಲಿ ಕೊಳಚೆ ನೀರು ಸಂಗ್ರಹಣೆಯ ಸಮಸ್ಯೆಯಿದ್ದು ಆ ವಾರ್ಡ್ಗೆ ಅದನ್ನು ಮೀಸಲಿಟ್ಟಿದೆ ಎಂದು ಅಧ್ಯಕ್ಷ ಪ್ರಸಾದ್ ಕುಮಾರ್ ಉತ್ತರಿಸಿದರು. ಇದಕ್ಕೆ ಸುರೇಶ್ ಪ್ರಭು, ಅಬ್ದುಲ್ ಕರೀಂ ಸಹಮತ ವ್ಯಕ್ತಪಡಿಸಿದರು. ಆ ಮೊತ್ತವನ್ನು ತನ್ನ ವಾರ್ಡ್ಗೆ ಒದಗಿಸಬೇಕೆಂದು ಕೊರಗಪ್ಪ ಪಟ್ಟು ಹಿಡಿದಿದ್ದು ಪರ ವಿರೋಧ ಚರ್ಚೆ ನಡೆಯಿತು.
ಆಶ್ರಯ ಕಾಲನಿಗಳಲ್ಲಿ 1.50 ಸೆಂಟ್ಸ್ ಜಾಗ ನೀಡುವುದರಿಂದ ಅಲ್ಲಿ ಕಸನಿರ್ವಹಣೆ, ಸ್ವಚ್ಛತೆಗೆ ಸಮಸ್ಯೆಯಾಗುತ್ತಿದ್ದು ಹೆಚ್ಚು ಜಾಗವನ್ನು ಒದಗಿಸುವಂತೆ ಪಿ.ಕೆ.ಥೋಮಸ್ ಮತ್ತಿತರರು ಸಲಹೆ ನೀಡಿದರು.ಈ ಕುರಿತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಇಂಜಿನಿಯರ್ ಪದ್ಮನಾಭ ಸಲಹೆ ನೀಡಿದರು.
ಉಪಾಧ್ಯಕ್ಷೆ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರು, ಎಂಜಿನಿಯರ್ ಪದ್ಮನಾಭ, ಮೆನೇಜರ್ ಗೋಪಾಲ್ ನಾಯ್ಕ್, ಪರಿಸರ ಅಭಿಯಂತರೆ ಶಿಲ್ಪಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.