ವಂ.ಡಾ. ಜಾನ್ ಫೆರ್ನಾಂಡಿಸ್ ನಿಧನ

ಮಂಗಳೂರು: ಧರ್ಮ ಸಮನ್ವಯ ಹಾಗೂ ಅಂತರ್ಧರ್ಮೀಯ ಸಂವಾದದ ಹರಿಕಾರ ವಂ. ಡಾ.ಜಾನ್ ಫೆರ್ನಾಂಡಿಸ್ (85) ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

1936ರಲ್ಲಿ ಉದ್ಯಾವರದಲ್ಲಿ ಜನಿಸಿದ ಇವರು, 1963ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದರು. ಬಿಜೈ ಮತ್ತು ರೊಸಾರಿಯೊ ಧರ್ಮಕೇಂದ್ರಗಳಲ್ಲಿ ಸಹಾಯಕ ಗುರುಗಳಾಗಿ ಹಾಗೂ ಹೊಸಬೆಟ್ಟು (ಮೂಡುಬಿದಿರೆ), ಕಟಪಾಡಿ ಹಾಗೂ ಬೆಳ್ಮಣ್ ಚರ್ಚ್‌ಗಳಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದರು.

ಜರ್ಮನಿಯ ಇನ್ಸ್‌ಬ್ರುಕ್ ಮತ್ತು ಟ್ರಿಯರ್‌ನಲ್ಲಿ ಉನ್ನತ ಶಿಕ್ಷಣದೊಂದಿಗೆ ಡಾಕ್ಟರೇಟ್ ಪದವಿ ಪಡೆದರು. ಮಂಗಳೂರು ಧರ್ಮಪ್ರಾಂತ್ಯದ ಮಂಗಳಜ್ಯೋತಿ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಹಾಗೂ ಜೆಪ್ಪುವಿನಲ್ಲಿರುವ ಸಂತ ಜೋಸೆಫ್‌ರ ಗುರುಕುಲದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಸುಮಾರು 10 ವರ್ಷ ಮಂಗಳೂರು ವಿಶ್ವವಿದ್ಯಾಲಯದ ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥರು ಹಾಗೂ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ.

ವಂ. ಡಾ.ಜಾನ್ ಅಂತರ್ಧರ್ಮೀಯ ಸಂವಾದವನ್ನು ನಡೆಸುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಇತರ ಧರ್ಮದ ಮುಖಂಡರನ್ನು ಒಗ್ಗೂಡಿಸಿ ಮಾನವೀಯತೆಯ ಆಧಾರದಲ್ಲಿ ಸರ್ವರು ಸಹಬಾಳ್ವೆಯನ್ನು ನಡೆಸಲು ಹಾಗೂ ಇತರ ಧರ್ಮಗಳನ್ನು ಗೌರವಿಸಿ ಜೀವಿಸಲು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ಅವರ ಅಂತಿಮಕ್ರಿಯೆಯು ವಾಮಂಜೂರು ಚರ್ಚ್‌ನಲ್ಲಿ ಜು.4ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಧರ್ಮಗುರುಗಳು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.