ಉಡುಪಿಯಲ್ಲಿ ಪಾಸಿಟಿವಿಟಿ ದರ ಹೆಚ್ಚಳ ಹಿನ್ನೆಲೆ: ವೀಕೆಂಡ್ ಕರ್ಫ್ಯೂ ಜಾರಿ: ಸಚಿವ ಕೋಟಾ
ಕುಂದಾಪುರ: ಪಾಸಿಟಿವಿಟಿ ದರ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಉಡುಪಿ ಜಿಲ್ಲೆಯನ್ನು ಸೇರಿಸಲಾಗಿದೆ. ವಾರಾಂತ್ಯ ಕರ್ಫ್ಯೂನಿಂದ ಜನಸಾಮಾನ್ಯರಿಗೆ ತೊಂದರೆಗಳಾಗುವುದು ಸತ್ಯ. ಆದರೆ ಪಾಸಿಟಿವಿಟಿ ರೇಟ್ ಹೆಚ್ಚಳವಾಗದಂತೆ ಜಾಗೃತೆ ವಹಿಸಬೇಕಾದ ಜವಾಬ್ದಾರಿ ನಮಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಪ್ರವಾಸಿ ಮಂದಿರದಲ್ಲಿ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿವೇಶನದ ಭೂ ಸರ್ವೆ ಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು ೨೧ ಕೋಟಿ ರೂ. ಯೋಜನೆ ಸಿದ್ದಗೊಂಡಿದೆ. ಆದರೆ ನಿವೇಶನದ ಸಮಸ್ಯೆಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದ ಹಿನ್ನೆಲೆಯಲ್ಲಿ ಇಂದು ಸಹಾಯಕ ಆಯುಕ್ತರು, ಅರಣ್ಯ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರನ್ನು ಸಭೆ ಕರೆದು ಚರ್ಚೆ ನಡೆಸಿದ್ದೇನೆ. ಕಟ್ಟಡ ಕಾಮಗಾರಿಗೆ ಎದುರಾಗಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಹದಿನೈದು ದಿನದೊಳಗೆ ಕಾಮಗಾರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ತಾ.ಪಂ ಮಾಜಿ ಸದಸ್ಯ ಕರಣ್ ಪೂಜಾರಿ, ಮುಖಂಡರಾದ ರಾಜೇಶ್ ಕಾವೇರಿ, ಸುಧೀರ್ ಕೆಎಸ್, ಪುರಸಭಾ ಸದಸ್ಯ ಗಿರೀಶ್ ಜಿ.ಕೆ ಮೊದಲಾದವರು ಇದ್ದರು.

















