ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು -ಡಾ.ಕೆ.ವಿ.ರಾಜೇಂದ್ರ
ಮಂಗಳೂರು: ಕೋವಿಡ್ ನಿಯಂತ್ರಣ ಮಾಡಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಅವರು ಪಣಂಬೂರು ಕೆಐಒಸಿಎಲ್ ಟೌನ್ ಶಿಫ್ ಆವರಣದಲ್ಲಿಂದು ಕೋವಿಡ್ ನಿಯಂತ್ರಣ ಲಸಿಕೆಯ ವಿತರಣಾ ಕಾರ್ಯ ಕ್ರಮ ವನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಎರಡು ಡೋಸ್ ಲಸಿಕೆ ಪಡೆದವರ ಸಂಖ್ಯೆ ಹೆಚ್ಚುತ್ತಿರುವಂತೆ ಕೋವಿಡ್ ಸೋಂಕಿತರ ಪ್ರಕರಣಗಳು ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ 30 ರಿಂದ 40 ಸಾವಿರ ಡೋಸ್ ಲಸಿಕೆ ವಿತರಣೆಯಾಗುತ್ತಿದೆ. ಪ್ರತಿದಿನ ಸುಮಾರು 12ಸಾವಿರ ಮಂದಿಯ ತಪಾಸಣೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.

ಕೆಐಒಸಿಎಲ್ ನ ನೌಕರರಲ್ಲಿ ಒಟ್ಟು 2673 ಮಂದಿಗೆ ಎರಡೂ ಡೋಸ್ ಲಸಿಕೆ ನೀಡುವ ಮೂಲಕ ಶೇ.98ಸಾಧನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ಸಮಾರಂಭದಲ್ಲಿ ಕೆಐಒಸಿಎಲ್ ಲಿ. ಪಣಂಬೂರು ಘಟಕದ ಮಹಾಪ್ರಬಂಧಕರಾದ ರಾಮಕೃಷ್ಣ ರಾವ್, ದಾಸಪ್ಪ ಶೆಟ್ಟಿ, ಉಪ ಮುಖ್ಯ ಆರೋಗ್ಯಾಧಿಕಾರಿ ಡಾ.ಎಂ.ಎನ್. ಮಂಜುನಾಥ್, ಹಿರಿಯ ಪ್ರಬಂಧಕರಾದ ಮುರುಗೇಶ್ ಮೊದಲಾದವರು ಉಪಸ್ಥಿತರಿದ್ದರು.

















