ರಾಜ್ಯ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಜನಾಂಗದ ನಿರ್ಲಕ್ಷ್ಯ: 2 ವರ್ಷಗಳಿಂದ ರಾಜಕೀಯ ಅಧಿಕಾರ ನೀಡದೇ ಇರುವುದಕ್ಕೆ ಆಕ್ರೋಶ
ಬೆಂಗಳೂರು: ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮಹತ್ವದ ಕೊಡುಗೆ ನೀಡಿರುವ ರೆಡ್ಡಿ ಜನಾಂಗಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ಹಾಗೂ ರಾಜಕೀಯ ಅವಕಾಶಗಳನ್ನು ನೀಡದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರೆಡ್ಡಿ ಜನ ಸಂಘ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.

ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ರೆಡ್ಡಿ ಸಮುದಾಯ ಸುಮಾರು 60 ಲಕ್ಷಕ್ಕೂ ಹೆಚ್ಚಿದ್ದು, ಸಚಿವ ಸಂಪುಟದಲ್ಲಿ ಒಂದೇ ಒಂದು ಸ್ಥಾನವನ್ನೂ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ನಗರದ ಕೋರಮಂಗಲದ ಕರ್ನಾಟಕ ರೆಡ್ಡಿ ಜನ ಸಂಘದ ಆವರಣದಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿದರು.
ಕರ್ನಾಟಕ ರೆಡ್ಡಿಜನ ಸಂಘದ ಅಧ್ಯಕ್ಷ ಎಸ್. ಜಯರಾಮ ರೆಡ್ಡಿ, ಉಪಾಧ್ಯಕ್ಷರಾದ ಎ.ಆರ್. ಶಿವರಾಮ್, ವೆಂಕಟಶಿವಾ ರೆಡ್ಡಿ ವಿ. ಪ್ರಧಾನ ಕಾರ್ಯದರ್ಶಿ ಕೆ.ಎನ್. ಕೃಷ್ಣಾ ರೆಡ್ಡಿ, ಜಂಟಿ ಕಾರ್ಯದರ್ಶಿಗಳಾದ ಕೆ. ಸದಾಶಿವ ರೆಡ್ಡಿ, ಕೆ.ಎಂ. ಕೃಷ್ಣಾ ರಡ್ಡಿ, ಮತ್ತು ಖಜಾಂಚಿಯಾದ ಚಂದ್ರಾ ರೆಡ್ಡಿ ಎಂ. ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು, ಸಹ ಸದಸ್ಯರುಗಳು ವಿಶೇಷ ಆಹ್ವಾನಿತರು, ದಾನಿಗಳು ಹಾಗೂ ಕರ್ನಾಟಕ ರಾಜ್ಯದ ರೆಡ್ಡಿ ಸಮುದಾಯದ ಪ್ರಮುಖ ಮುಖಂಡರು ಭಾಗವಹಿಸಿದ್ದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ರೆಡ್ಡಿ ಸಮುದಾಯದವರೇ ಮೊದಲ ಮುಖ್ಯಮಂತ್ರಿಗಳಾಗಿದ್ದು, ಕರ್ನಾಟಕದಲ್ಲಿ ಕೆ.ಸಿ. ರೆಡ್ಡಿ ಪ್ರಥಮ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಅಂದಿನಿಂದ ಈ ವರೆಗೆ ರೆಡ್ಡಿ ಸಮುದಾಯದವರು ರಾಜ್ಯದ ರಾಜಕೀಯ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಶೇಷ ಕೊಡುಗೆ ನೀಡುತ್ತಾ ಬಂದಿದ್ದು, ಯಾವುದೇ ಸಂದರ್ಭದಲ್ಲೂ ರೆಡ್ಡಿ ಜನಾಂಗವನ್ನು ಯುವುದೇ ಪಕ್ಷ ನಿರ್ಲಕ್ಷ್ಯ ಮಾಡಿರಲಿಲ್ಲ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಅಂದರೆ ಸುಮಾರು ಎರಡು ವರ್ಷಗಳಿಂದ ರಾಜಕೀಯ ಅಧಿಕಾರ ನೀಡದೇ ಪರಮ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎಸ್. ಜಯರಾಮ ರೆಡ್ಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಬೆಂಗಳೂರು ನಿರ್ಮಾಣಕ್ಕೆ ರೆಡ್ಡಿಗಳು ಅಮೂಲ್ಯ ಕೊಡುಗೆ ನೀಡುತ್ತಾ ಬಂದಿದ್ದು, ಪಾಪರೆಡ್ಡಿ ಪಾಳ್ಯ, ಮುನಿರೆಡ್ಡಿ ಪಾಳ್ಯ ಹೀಗೆ ಹತ್ತು ಹಲವು ಹೆಸರಿನ ಪ್ರದೇಶಗಳು ಈಗಲೂ ರೆಡ್ಡಿಗಳ ಹೆಸರಿನಿಂದಲೇ ಕರೆಯಲಾಗುತ್ತಿದೆ. ವಿಶೇಷವಾಗಿ ಬೆಂಗಳೂರಿನ ಕೈಗಾರಿಕಾ ಅಭಿವೃದ್ಧಿಗೆ ಜನಾಂಗ ಸಾಕಷ್ಟು ಕೊಡುಗೆ ನೀಡಿದ್ದು,. ರೆಡ್ಡಿ ಸಮುದಾಯದವರಿಗೆ ಸೇರಿದ ಸಹಸ್ರಾರು ಎಕರೆ ಅತ್ಯಮೂಲ್ಯ ಜಮೀನು ಬೆಂಗಳೂರು ಅಭಿವೃದ್ಧಿಗಾಗಿ ನೀಡಿದ್ದೇವೆ. ಬೆಂಗಳೂರು ನಗರದ ಶ್ರೇಯೋಭಿವೃದ್ಧಿಗಾಗಿ ರೆಡ್ಡಿ ಸಮುದಾಯ ಮಾಡಿರುವ ತ್ಯಾಗವನ್ನು ಬಿಜೆಪಿ ಸರ್ಕಾರ ಉಪೇಕ್ಷೆ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹೆಚ್ಚು ಜನ ಸಂಖ್ಯೆ ಹೊಂದಿರುವ ರೆಡ್ಡಿ ಜನಾಂಗ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ, ಅಧಿಕಾರದಿಂದ ದೂರ ಉಳಿಯುವಂತೆ ಮಾಡುವ ಶಕ್ತಿ ಹೊಂದಿದೆ. ರೆಡ್ಡಿ ಜನಾಂಗದಲ್ಲೂ ಬಡವರು, ಹಿಂದುಳಿದವರಿದ್ದು, ಇವರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ತರಲು ರೆಡ್ಡಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮಾಡಿದ್ದ ಮನವಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ಯೋಗಿ ವೇಮನ, ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಮತ್ತಿತರ ಮಹಾನ್ ಪುಣ್ಯ ಪುರುಷರ ಪರಂಪರೆಯಲ್ಲಿ ಸಾಗುತ್ತಿರುವ ರೆಡ್ಡಿ ಜನಾಂಗ ಒಂದು ಜಾತಿಯಲ್ಲ. ಇದೊಂದು ಸಂಸ್ಕೃತಿಯಾಗಿದೆ ಎಂಬುದನ್ನು ಆಡಳಿತ ನಡೆಸುವವರು ಮರೆಯಬಾರದು. ಎಲ್ಲರನ್ನು ಒಗ್ಗೂಡಿಸಿ ಸೌಹಾರ್ದತೆಯಿಂದ ಬದುಕುವ ಸಮುದಾಯಕ್ಕೆ ಪರಮ ಅನ್ಯಾಯವಾಗಿದೆ. ರಾಜ್ಯದ, ಅದರಲ್ಲೂ ವಿಶೇವಾಗಿ ಬೆಂಗಳೂರಿನ ಶಾಸಕರುಗಳಿಗೆ ಸಚಿವ ಸ್ಥಾನ ನೀಡದೇ ಇರುವುದು ಸಮಸ್ತ ರೆಡ್ಡಿ ಜನಾಂಗದಲ್ಲಿ ಆಕ್ರೋಶ ಉಂಟು ಮಾಡಿದೆ ಎಂದು ಎಸ್. ಜಯರಾಮ ರೆಡ್ಡಿ ಹೇಳಿದರು.
ಆದ್ದರಿಂದ ಕೂಡಲೇ “ರೆಡ್ಡಿ ಅಭಿವೃಧ್ಧಿ ನಿಗಮ” ಸ್ಥಾಪಿಸುವ ಜತೆಗೆ ಬಾಕಿ ಉಳಿದಿರುವ ನಾಲ್ಕು ಸಚಿವ ಸ್ಥಾನಗಳಲ್ಲಿ ಹೆಚ್ಚಿನ ಅವಕಾಶಗಳನ್ನು ರೆಡ್ಡಿ ಜನಾಂಗಕ್ಕೆ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.


















