ಬಂಟ್ವಾಳ: ರಾಷ್ಟ್ರಪತಿಯನ್ನು ಭೇಟಿಯಾಗಲಿರುವ 4 ಆದಿವಾಸಿ ಮಹಿಳೆಯರು

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ಇದೀಗ ದೆಹಲಿಯ ವಿಮಾನವೇರುವ ಭಾಗ್ಯ ಒದಗಿಬಂದಿದೆ. ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯಾಗಿದ್ದು, ಸಂಜೀವಿನೀ -ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾರ್ಚ್ 1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶದೊರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ ತಾಲೂಕಿನ ಮೀನಾಕ್ಷಿ , ವನಿತಾ, ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ, ಬಂಟ್ವಾಳ ತಾಲೂಕಿನ ಸುಂದರಿ ದೆಹಲಿ ಪ್ರವಾಸ ಭಾಗ್ಯ ಪಡೆದವರು.

ಸುಳ್ಯ ತಾಲೂಕಿನ ಕೊಲ್ಲಮೊಗರುವಿನ ಮೀನಾಕ್ಷಿ ಆದಿಲಕ್ಷ್ಮೀ ಸಂಜೀವಿನೀ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ಕೀರ್ತಿ ಸಂಜೀವಿನೀ ಒಕ್ಕೂಟದ ಸದಸ್ಯರಾಗಿದ್ದಾರೆ. ಕೃಷಿ ಉದ್ಯೋಗ ಸಖಿಯೂ ಆಗಿರುವ ಮೀನಾಕ್ಷಿ ಯವರು ಸ್ಥಳೀಯವಾಗಿ ಸಂಘಟನಾ ಚತುರರಾಗಿ ಗುರುತಿಸಿಕೊಂಡವರು. ಬಳ್ಳಿಯಿಂದ ಬುಟ್ಟಿ ಸಹಿತ ಇನ್ನಿತ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರು ಪಳಗಿದವರು. ದೆಹಲಿಗೆ ಹೋಗುತ್ತೇನೆ, ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇನೆ ಎನ್ನುವುದೇ ನನಗೆ ತುಂಬಾ ಖುಷಿ ತಂದಿದೆ ಎನ್ನುತ್ತಾರೆ ಅವರು,

ಸುಳ್ಯ ತಾಲೂಕಿನ ಕೊಲ್ಲಮೊಗರು ಗ್ರಾಮದ ವನಿತಾ ರವರು ಆದಿಲಕ್ಷ್ಮೀ ಸ್ವಸಹಾಯಯ ಗುಂಪಿನ ಸದಸ್ಯೆಯಾಗಿರುವ ಇವರು ಬಡತನದ ಹಿನ್ನೆಲೆಯಲ್ಲಿ ಬೆಳೆದವರು. ಬಳ್ಳಿಯಿಂದ ಬುಟ್ಟಿ ಸಹಿತ ಅನೇಕ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರದು ಎತ್ತಿದ ಕೈ. ದೆಹಲಿಗೆ ವಿಮಾನದಲ್ಲಿ ಹೋಗುವುದೇ ನಮಗೆ ದೊಡ್ಡ ಸಂಭ್ರಮ. ರಾಷ್ಟ್ರಪತಿಗಳನ್ನು ಭೇಟಿಯಾಗುವುದು ಮತ್ತಷ್ಟು ಖುಷಿಯ ವಿಚಾರ ಎನ್ನುತ್ತಾರವರು.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಗೆ ಸೇರಿದ ಲಕ್ಷ್ಮೀ ಅವರು ನಿಸರ್ಗ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ತ್ರಿವೇಣಿ ಸಂಂಜೀವಿನೀ ಒಕ್ಕೂಟದ ಸದಸ್ಯೆ. ತನ್ನ ತಾಯಿ ತಯಾರಿಸುವ ಬುಟ್ಟಿ ಸಹಿತ ಕರಕುಶಲ ಸಾಮಾಗ್ರಿಗಳನ್ನು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ನಾನು ಮಂಗಳೂರು ಬಿಟ್ಟರೆ ಬೇರೆಲ್ಲೂ ಹೋಗಿಲ್ಲ. ಇದೀಗ ದೆಹಲಿಗೆ ಹೋಗುವ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಸುಂದರಿಯವರು ಶಿವಗಿರಿ ಗುಂಪಿನ ಸದಸ್ಯೆಯಾಗಿದ್ದು,ಸ್ಪೂರ್ತಿ ಸಂಜೀವಿನೀ ಒಕ್ಕೂಟ ದ ಸದಸ್ಯೆಯಾಗಿದ್ದಾರೆ. ನವಸಾಕ್ಷರೆಯಾಗಿರುವ ಇವರು,ಕೊರಗರ ಡೋಲು ತಂಡದ ಪ್ರಮುಖ ಕಲಾವಿದೆಯಾಗಿ ಗುರುತಿಸಿಕೊಂಡವರು. ಡೋಲು ತಂಡದ ಜೊತೆ ಧಾರವಾಡ, ಬಳ್ಳಾರಿ, ಬೆಂಗಳೂರು ಗುಲ್ಭರ್ಗಜಿಲ್ಲೆಗಳಿಗೆ ಭೇಟಿ ನೀಡಿದ್ದ ಇವರು ಇದೇ ಮೊದಲ ಬಾರಿಗೆ ದೆಹಲಿಗೆ ವಿಮಾನದಲ್ಲಿ ತೆರಳುತ್ತಿದ್ದಾರೆ. ಬುಟ್ಟಿ ಸಹಿತ ಇತರ ಕರಕುಶಲ ವಸ್ತುಗಳ ತಯಾರಿಯಲ್ಲೂ ಇವರದು ಎತ್ತಿದ ಕೈ

ಫೆ.27 ರಂದು ರಾತ್ರಿ ಬಸ್ ನಲ್ಲಿ ಬೆಂಗಳೂರಿಗೆ ಪಯಣಿಸಲಿದ್ದಾರೆ. ಫೆ.28ರಂದು ಅಪರಾಹ್ನ ರಾಜ್ಯಮಟ್ಟದ ಅಧಿಕಾರಿಗಳು ಇವರ ಜೊತೆ ಸಂವಾದ ನಡೆಸುವರು. ಫೆ.29 ರಂದು ಮುಂಜಾನೆ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಅಪರಾಹ್ನದ ಬಳಿಕ ಇವರು ದೆಹಲಿಯ ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡಲಿದ್ದು, ಮಾರ್ಚ್ 1ರಂದು ಬೆಳಿಗ್ಗೆ ರಾಷ್ಟ್ರಪತಿ ಗಳ ಭೇಟಿ ಹಾಗೂ ಅಮೃತ ಉದ್ಯಾನ ಭೇಟಿಗೆ ಅವಕಾಶ ಒದಗಿಬರಲಿದೆ. ಬಳಿಕ ಆದಿನ ರಾತ್ರಿಯೇ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ಪಯಣಿಸಲಿರುವ ಇವರು ಫೆ.2 ರಂದು ಹಗಲು ಮತ್ತೆ ಮಂಗಳೂರಿನತ್ತ ವಾಪಾಸು ಪ್ರಯಾಣ ಬೆಳೆಸಲಿದ್ದಾರೆ.

Related Posts

Leave a Reply

Your email address will not be published.