ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ರಾಜ್ಯ ಬಿಜೆಪಿ ನಿಯೋಗ

ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಹಿನ್ನೆಲೆ ರವಿವಾರ ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ದೇವರ ದರ್ಶನ ಪಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರು, ಬಿಜೆಪಿಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ವಿವಿಧ ಪದಾಧಿಕಾರಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ವಿಜಯೇಂದ್ರ ಮಾತನಾಡಿ, ಎಸ್ಐಟಿ ತನಿಖೆಯನ್ನು ಬಿಜೆಪಿ ಪ್ರಾರಂಭದಲ್ಲೇ ಸ್ವಾಗತಿಸಿದ್ದು, ಅದರ ಮಧ್ಯಂತರ ವರದಿಯನ್ನು ಸರಕಾರ ಮಂಡಿಸಬೇಕು ಎಂದು ಸದನದಲ್ಲಿ ಆಗ್ರಹಿಸಲಾಗಿದೆ. ಕ್ಷೇತ್ರದ ಅಪಪ್ರಚಾರ ಮಾಡುವ ಕುರಿತು ಕೂಡ ಸರಕಾರ ಸಮಗ್ರವಾಗಿ ತನಿಖೆ ನಡೆಸುವ ಕಾರ್ಯವನ್ನು ಮಾಡಬೇಕು ಎಂದು ಆಗ್ರಹಿಸಿದರು.