ಕರೂರು ರ್‍ಯಾಲಿಯ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 39ಕ್ಕೆ ಏರಿಕೆ

ಚೆನ್ನೈ: ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ್‍ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಮೃತರಲ್ಲಿ 16 ಮಹಿಳೆಯರು, 8 ಮಕ್ಕಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭಿಸಿರುವ ಟಿವಿಕೆ ಮುಖ್ಯಸ್ಥ, ನಟ ವಿಜಯ್‌ ಕರೂರಿನಲ್ಲಿ ಶನಿವಾರ(ಸೆ.27) ಬೃಹತ್‌ ‌ರ್‍ಯಾಲಿ ಆಯೋಜಿಸಿದ್ದರು. ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿದೆ.ಘಟನೆಯಲ್ಲಿ ಸುಮಾರು 111 ಮಂದಿ ಗಾಯಗೊಂಡಿದ್ದು, ಕರೂರು ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನನ್ನ ಹೃದಯ ಛಿದ್ರವಾಗಿದೆ. ಪದಗಳಲ್ಲಿ ವರ್ಣಿಸಲಸಾಧ್ಯವಾದ ಅಸಹನೀಯ ದುಃಖದಲ್ಲಿ ನರಳುತ್ತಿದ್ದೇನೆ’ ಎಂದು ಕರೂರು ಕಾಲ್ತುಳಿತ ಪ್ರಕರಣದ ಬಗ್ಗೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಸಂತಾಪ ವ್ಯಕ್ತಪಡಿಸಿದ್ದಾರೆ.ಅತೀವ ನೋವಿನಲ್ಲಿ ನಾನು ನರಳುತ್ತಿದ್ದೇನೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ, ಸಹೋದರಿಯರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

ತಮಿಳುನಾಡು ಉಸ್ತುವಾರಿ ಡಿಜಿಪಿ ಜಿ ವೆಂಕಟರಾಮನ್ ಮಾತನಾಡಿ, ವಿಜಯ್ ಅವರ ಪಕ್ಷವು ಮೊದಲು ಕರೂರ್ ಲೈಟ್ಹೌಸ್ ರೌಂಡಾನಾದಲ್ಲಿ ರ‍್ಯಾಲಿ ನಡೆಸಲು ಅನುಮತಿ ಕೇಳಿತ್ತು. ಕಳೆದ ಎರಡು ರ‍್ಯಾಲಿಗಳಲ್ಲಿ ಭಾರಿ ಜನಸಂದಣಿ ಸೇರಿರುವುದನ್ನು ಪರಿಗಣಿಸಿ ನಾವು ಆ ಪ್ರದೇಶದಲ್ಲಿ ಅನುಮತಿ ನೀಡಲಿಲ್ಲ. ಆ ಸ್ಥಳ ಇದಕ್ಕಿಂತ ಕಿರಿದಾಗಿತ್ತು. ಅವರು 10,000 ಜನರು ಬರುತ್ತಾರೆ ಎಂದು ಹೇಳಿದರು. ಆದರೆ 27,000ಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.

“ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ರ‍್ಯಾಲಿಗೆ ಅನುಮತಿ ಕೇಳಲಾಗಿತ್ತು. ವಿಜಯ್ ಮಧ್ಯಾಹ್ನ 12.30ರ ವೇಳೆಗೆ ಅಲ್ಲಿಗೆ ತಲುಪುತ್ತಾರೆ ಎಂದು ಹೇಳಿದ್ದರು. ಬೆಳಿಗ್ಗೆ 11 ಗಂಟೆಯಿಂದ ಜನಸಮೂಹ ಸೇರಲು ಪ್ರಾರಂಭಿಸಿತು. ಆದರೆ ಅವರು ಸಂಜೆ 7.40ಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಜನಸಮೂಹಕ್ಕೆ ನೀರು ಅಥವಾ ಆಹಾರ ಸಿಗಲಿಲ್ಲ. ನಾವು ಯಾರನ್ನೂ ದೂಷಿಸುತ್ತಿಲ್ಲ, ಆದರೆ ಸತ್ಯಗಳನ್ನು ಹೇಳುತ್ತಿದ್ದೇವೆ” ಎಂದು ಡಿಜಿಪಿ ಹೇಳಿದರು.

ಏತನ್ಮಧ್ಯೆ, ಕರೂರು ಪಟ್ಟಣ ಪೊಲೀಸರು ಟಿವಿಕೆ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಳಗನ್ ಸೇರಿದಂತೆ ಹಲವರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 109,110,125ಬಿ, 223 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109 ಮತ್ತು 110 ಕ್ರಮವಾಗಿ ಕೊಲೆ ಯತ್ನ ಮತ್ತು ಅಪರಾಧಿಕ ನರಹತ್ಯೆಗೆ ಯತ್ನಿಸುವ ಪ್ರಕರಣಗಳಾಗಿವೆ. ಸೆಕ್ಷನ್ 125 ದುಡುಕಿನ ಅಥವಾ ನಿರ್ಲಕ್ಷ್ಯದ ವರ್ತನೆಯ ಮೂಲಕ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ಉಲ್ಲೇಖಿಸುತ್ತದೆ. ಸೆಕ್ಷನ್ 223 ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶವನ್ನು ಪಾಲಿಸದಿದ್ದಕ್ಕೆ ಸಂಬಂಧಿಸಿದ್ದಾಗಿದೆ

Related Posts

Leave a Reply

Your email address will not be published.